
ಪುತ್ತೂರು:ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ತಿರಸ್ಕೃತಗೊಂಡಿರುವ 94ಸಿ ಹಾಗೂ 94ಸಿಸಿ ಕಡತಗಳನ್ನು ಮರು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವಂತೆ ಶಾಸಕ ಅಶೋಕ್ ರೈ ಅವರು ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಮನವಿ ಸಲ್ಲಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು, ಸುಮಾರು 8420 ಕಡತಗಳನ್ನು ಪೂರ್ಣ ಪರಿಶೀಲನೆ ಮಾಡದೆ ರದ್ದು ಮಾಡಲಾಗಿದೆ ಎಂದು ಗಮನ ಸೆಳೆದರು. “ತಿರಸ್ಕೃತಗೊಂಡ ಅರ್ಜಿದಾರರಲ್ಲಿ ಅನೇಕರು ಈಗಾಗಲೇ ಮನೆಗಳನ್ನು ನಿರ್ಮಿಸಿಕೊಂಡು ವಾಸ್ತವ್ಯವಿದ್ದು, ಎಲ್ಲಾ ದಾಖಲೆಗಳನ್ನೂ ಹೊಂದಿದ್ದಾರೆ. ಆದರೂ ಅವರಿಗೆ ಯಾವುದೇ ಕಾನೂನು ದಾಖಲೆ ಇಲ್ಲದ ಕಾರಣದಿಂದ ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ” ಎಂದು ಅವರು ತಿಳಿಸಿದರು.
ಶಾಸಕ ಅಶೋಕ್ ರೈ ಅವರು, “ಅರ್ಜಿ ಹಾಕಿದ ಫಲಾನುಭವಿಗಳಿಗೆ ಮನೆ ಇದ್ದರೂ ಕಡತ ತಿರಸ್ಕಾರ ಮಾಡಿರುವುದು ಪ್ರಶ್ನಾರ್ಹ. ಬಡವರು ಕಟ್ಟಿಕೊಂಡು ವಾಸವಾಗಿರುವ ಮನೆಗಳ ಅಡಿಸ್ಥಳವನ್ನು ಅವರಿಗೆ ಹಕ್ಕು ಪತ್ರ ನೀಡದೆ ತಡೆದಿರುವುದು ಅನ್ಯಾಯ. ಎಲ್ಲಾ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ಸಿಗುವಂತೆ ನೋಡಿಕೊಳ್ಳುತ್ತೇನೆ” ಎಂದು ಭರವಸೆ ನೀಡಿದರು.
ಮನವಿ ಸ್ವೀಕರಿಸಿದ ಸಚಿವ ಕೃಷ್ಣಬೈರೇಗೌಡರು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.






