
ಪುತ್ತೂರು, ಅ.15 : “ಮದ್ಯಪಾನ ಮಾಡುವವರ ಮಾತು-ಕೃತಿಗಳು ಹಾಸ್ಯಾಸ್ಪದವಾಗುತ್ತವೆ. ಕುಡಿತದಂತಹ ದುಶ್ಚಟಕ್ಕೆ ಬಲಿಯಾಗದೆ ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿಡುವುದು ಅಗತ್ಯ. ನವಜೀವನ ಸಮಿತಿಗಳು ಮದ್ಯವರ್ಜನೆ ಮೂಲಕ ಜೀವನ ಸುಧಾರಿಸಿಕೊಂಡವರಿಗಾಗಿ ಉತ್ತಮ ವೇದಿಕೆಗಳಾಗಿವೆ,” ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಬುಧವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣ ಉದ್ದೇಶದೊಂದಿಗೆ ನಡೆದ “ಗಾಂಧಿಸ್ಕೃತಿ ಮತ್ತು ಜನಜಾಗೃತಿ ಸಮಾವೇಶ” ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಆಶಯ ಭಾಷಣ ಮಾಡಿದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕ ಸಂಜೀವ ಮಠಂದೂರು, ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾಧ್ಯಕ್ಷ ನಟರಾಜ ಬಾದಾಮಿ ಅವರು ಉಪಸ್ಥಿತರಿದ್ದು, ಸಮಾಜದಲ್ಲಿನ ದುಶ್ಚಟ ನಿವಾರಣೆಯ ಅಗತ್ಯತೆಯನ್ನು ಉಲ್ಲೇಖಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಅಧ್ಯಕ್ಷತೆ ವಹಿಸಿದರು.
ಮದ್ಯವರ್ಜನಾ ಶಿಬಿರಗಳಲ್ಲಿ ಪಾನಮುಕ್ತರಾಗಿ ಜೀವನ ಸುಧಾರಿಸಿಕೊಂಡ ಕೆಲವರು ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದ ಅಂಗವಾಗಿ ಬನ್ನೂರು ಸರ್ಕಾರಿ ಶಾಲೆಗೆ ಆವರಣಗೋಡೆ ನಿರ್ಮಾಣಕ್ಕೆ ಅನುದಾನ, ಆರ್ಯಾಪು ಸುಶೀಲಾ ಅವರಿಗೆ ಮಾಸಾಶನ, ಪ್ರತೀಕ್ಷಾ ಅವರಿಗೆ ಶಿಷ್ಯವೇತನ, ಅಝೀನಾ ಮತ್ತು ಸಮೀಕ್ಷಾ ಅವರಿಗೆ ಸುಜ್ಞಾನ ನಿಧಿ, ಸಂಕಮ್ಮ ಕುಟುಂಬಕ್ಕೆ ಸಲಕರಣೆಗಳ ವಿತರಣೆ ನಡೆಯಿತು.
ರಾಜ್ಯದಲ್ಲಿ ಮದ್ಯಪಾನ ನಿಷೇಧ ಜಾರಿಗೊಳಿಸುವಂತೆ, ಮಕ್ಕಳಿಗೆ ಮದ್ಯದ ಹಾನಿ ಕುರಿತು ಶಿಕ್ಷಣ ನೀಡುವಂತೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮದ್ಯದಂಗಡಿಗಳಿಗೆ ಅವಕಾಶ ನೀಡಬಾರದು ಎಂಬ ಠರಾವು ಮಂಡಿಸಿ ಅದನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಮಾಜಿ ಶಾಸಕ ರುಕ್ಷಯ ಪೂಜಾರಿ, ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಸಾಜ್ ರಾಧಾಕೃಷ್ಣ ಆಳ್ವ, ಪ್ರಮುಖರಾದ ಎ.ಸಿ. ಭಂಡಾರಿ, ಶಶಿಕುಮಾರ್ ಬಾಳ್ಕೊಟ್ಟು, ರವಿ ಮುಂಗ್ಲಿಮನೆ, ವಸಂತ ಸಾಲ್ಯಾನ್, ಲೋಕೇಶ್ ಹೆಗ್ಡೆ, ಮಹೇಶ್ ಸವಣೂರು, ಲೋಕನಾಥ, ಖಾಸಿಂ, ರೊನಾಲ್ಡ್, ಅಖಿಲೇಶ್, ಜಯಪ್ರಕಾಶ್, ಸುಭಾಶ್ಚಂದ್ರ, ಮುಹಮ್ಮದ್ ಇಸ್ಥಾಯೀಲ್, ರಾಮಚಂದ್ರ, ಶಾರದಾ ಮೊದಲಾದವರು ಉಪಸ್ಥಿತರಿದ್ದರು.
ಯೋಜನೆಯ ನಿರ್ದೇಶಕ ಬಾಬು ನಾಯ್ಕ ವಂದಿಸಿದರು. ಯೋಜನಾಧಿಕಾರಿ ಗಣೇಶ್ ಆಚಾರ್ಯ ಮತ್ತು ಬಾಲಕೃಷ್ಣ ಅಳ್ವ ಕಾರ್ಯಕ್ರಮವನ್ನು ನಿರೂಪಿಸಿದರು.









