
ಪುತ್ತೂರು: ಮನೆ ನಿವೇಶನ ಇಲ್ಲದ ಅರ್ಹ ಬಡ ಫಲಾನುಭವಿಗಳು ಇನ್ನು ಮುಂದಕ್ಕೆ ಯಾವುದೇ ಗ್ರಾಮದಲ್ಲಿ ಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಫಲಾನುಭವಿಗಳು ನಿವೇಶನಕ್ಕೆ ಆಯಾ ಗ್ರಾಮದಲ್ಲಿ ಅರ್ಜಿ ಸಲ್ಲಿಸಿದ್ದು ಅಲ್ಲಿ ನಿವೇಶನದ ಕೊರತೆಯಿದ್ದಲ್ಲಿ ಪಕ್ಕದ ಗ್ರಾಮ ಅಥವಾ ನಿವೇಶನ ಪಡೆದುಕೊಳ್ಳಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಾವುದೇ ಗ್ರಾಮದಲ್ಲಿ ಬೇಕಾದರೂ ಅರ್ಜಿ ಸಲ್ಲಿಸಿ ಎಂದು ಕರ್ನಾಟಕ ಸರಕಾರ ರಾಜೀವ ಗಾಂಧಿ ವಸತಿ ನಿಗಮದಿಂದ ಸುತ್ತೋಲೆ ಹೊರಡಿಸಲಾಗಿದ್ದು ಇದರಿಂದ ಪುತ್ತೂರು ಶಾಸಕ ಅಶೋಕ್ ರೈ ಅವರ ಬಡವರಿ ನಿವೇಶನ ಹಂಚಿಕೆ ಕನಸಿಗೆ ಸರಕಾರದಿಂದ ಪೂರ್ಣ ಬೆಂಬಲ ಸಿಕ್ಕಂತಾಗಿದೆ.
ಅಶೋಕ್ ರೈ ಶಾಸಕರಾದ ಬಳಿಕ ನಿವೇಶನ ರಹಿತ ಅರ್ಹ ಬಡ ಫಲಾನುಭವಿಗಳಿಗೆ ಸೈಟ್ ಹಂಚಿಕೆ ಮಾಡಲು ಈಗಾಗಲೇ ೧೮ ಗ್ರಾಮಗಳಲ್ಲಿ ೩೮೦ ಕ್ಕೂ ಮಿಕ್ಕಿ ಎಕ್ರೆ ಜಾಗವನ್ನು ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಕಾಯ್ದಿರಿಸಲಾಗಿದೆ. ಪುತ್ತೂರು ನಗರಸಭಾ ವ್ಯಾಪ್ತಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ನಿವೇಶನಕ್ಕೆ ಸರಕಾರಿ ಜಾಗ ದೊರೆತಿಲ್ಲ. ನಿವೇಶನ ರಹಿತ ಗ್ರಾಮದ ಫಲಾನುಭವಿಗಳಿಗೆ ಬೇರೆ ಗ್ರಾಮಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರಲಿಲ್ಲ. ಆಯಾ ಗ್ರಾಮದವರು ಆಯಾ ಗ್ರಾಮದಲ್ಲಿ ಮಾತ್ರ ನಿವೇಶನಕ್ಕೆ ಅರ್ಜಿ ಸಲ್ಲಿಸಬಹುದು ಎಂಬ ತಕರಾರು ಇತ್ತು. ಈ ಬಗ್ಗೆ ಮಂಗಳವಾರದಂದು ಬೆಂಗಳೂರಿನ ರಾಜೀವ ಗಾಂಧಿ ವಸತಿ ನಿಗಮ ಅಧಿಕಾರಿಯನ್ನು ಭೇಟಿಯದ ಶಾಸಕರು ನಿವೇಶನ ರಹಿತರಿಗೆ ಯಾವುದೇ ಗ್ರಾಮದಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಕೇಳಿಕೊಂಡಿದ್ದರು. ಶಾಸಕರ ಕೋರಿಕೆ ಯನ್ನು ಮನ್ನಿಸಿದ ಇಲಾಖೆ ಬುಧವಾರ ಸುತ್ತೋಲೆಯನ್ನು ಹೊರಡಿಸಿದ್ದು ಯಾವುದೇ ಫಲಾನುಭವಿಗಳು ನಿವೇಶನ ಹೊಂದಿರುವ ಯಾವುದೇ ಗ್ರಾಮದಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಜಿಪಂ ಕಾರ್ಯನಿರ್ವಹಣಾಧಿಕಾರಿ ಮತ್ತು ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಸುತ್ತೋಲೆಯನ್ನು ಹೊರಡಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸುವಂತೆ ಆದೇಶವನ್ನು ಹೊರಡಿಸಿದೆ.
ಸುತ್ತೋಲೆಯಲ್ಲಿ ಏನಿದೆ:
ಪುತ್ತೂರು ತಾಲ್ಲೂಕಿನ ಅರ್ಹ ನಿವೇಶನರಹಿತರಿಗೆ ನಿವೇಶನ ಹಂಚಿಕೆಗೆ ಕೆಲವು ಗ್ರಾಮ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಮೀನಿನ ಲಭ್ಯತೆ ಇಲ್ಲದ ಕಾರಣ ಜಮೀನು ಲಭ್ಯವಿರುವ ಬೇರೆ ಗ್ರಾಮ ಪಂಚಾಯಿತಿ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸುವ ಕುರಿತು ನಿರ್ದೇಶನ ನೀಡಲು ಕೋರಿ ಉಲ್ಲೇಖ(೧&೨)ರಲ್ಲಿ ಕೋರಲಾಗಿದೆ.
ಉಲ್ಲೇಖ(೩)ರ ಪತ್ರದಲ್ಲಿ ಕಾರ್ಯನಿರ್ವಾಹಣಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಇವರು ಸರ್ಕಾರದ ಸುತ್ತೋಲೆ ಪ್ರಕಾರ ಫಲಾನುಭವಿ ಸಂಬಂಧಪಟ್ಟ ಗ್ರಾಮದರಾಗಿರಬೇಕು ಎಂಬುದಾಗಿದ್ದು, ಕೆಲವು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯಿಂದ ಬೇರೆ ಗ್ರಾಮದವರಿಗೆ ನಿವೇಶನ ನೀಡುವ ಕುರಿತು ಅಕ್ಷೇಪ ವ್ಯಕ್ತಪಡಿಸಿದ್ದು, ಬೇರೆ ಗ್ರಾಮದ ನಿವೇಶನ ರಹಿತ ಫಲಾನುಭವಿಗಳನ್ನು ಲಾಗಿನ್ ನಲ್ಲಿ ನಮೂದಿಸುವ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಲಾಗಿದೆ.
ಸರ್ಕಾರದ ಮನೆ ಮಾರ್ಗಸೂಚಿಗಳನ್ವಯ ನಿವೇಶನರಹಿತರು ಸಂಬಂಧಪಟ್ಟ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರಬೇಕು. ಆದರೆ ಸದರಿ ಪ್ರಕರಣದಲ್ಲಿ ನಿವೇಶನರಹಿತರು ವಾಸವಿರುವ ಗ್ರಾಮ ಪಂಚಾಯತಿ/ಗ್ರಾಮ/ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯನ್ನು ಹೊರುತಪಡಿಸಿ, ಬೇರೆ ಸ್ಥಳಗಳಲ್ಲಿ ನಿವೇಶನ ಹಂಚಿಕೆಗೆ ಅವಕಾಶ ಕಲ್ಪಿಸುವಂತೆ ಕೋರಿದ್ದು, ಈ ಕೆಳಕಂಡಂತೆ ಕ್ರಮವಹಿಸಲು ಕೋರಿದೆ.
೧. ಮೂಲ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ನಿವೇಶನರಹಿತರಿಗೆ ಬೇರೆ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ ಹಂಚಿಕೆಗೆ ಕ್ರಮವಹಿಸುವ ಮೊದಲು ನಿವೇಶನರಹಿತರು ವಾಸವಿದ್ದ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಂಚಿಕೆಗೆ ಜಮೀನು/ನಿವೇಶನ ಲಭ್ಯವಿಲ್ಲದಿರುವ ಖಚಿತಪಡಿಸಿಕೊಳ್ಳುವುದು.
೨. ಮೂಲ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ನಿವೇಶನರಹಿತರು ಬೇರೆ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿವೇಶನ ಪಡೆಯಲು ಹಾಗೂ ಆ ಸ್ಥಳದಲ್ಲಿ ವಾಸಿಸಲು ಫಲಾನುಭವಿಗಳು ಒಪ್ಪಿಗೆ ನೀಡಿರುವ ಲಿಖಿತ ದಾಖಲೆಗಳೊಂದಿಗೆ
ಗ್ರಾಮಸಭೆ/ನಗರ ಆಶ್ರಯ ಸಮಿತಿಯಲ್ಲಿ ಚರ್ಚಿಸಿ, ಜಮೀನು/ನಿವೇಶನ ಲಭ್ಯವಿರುವ ಸ್ಥಳದಲ್ಲಿ ನಿವೇಶನ ಹಂಚಿಕೆಗೆ ತೀರ್ಮಾನಿಸಿ ಠರಾವು ಹೊರಡಿಸುವುದು.
೩. ಜಮೀನು ಲಭ್ಯವಿರುವ ಯಾವುದೇ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಅರ್ಹ ನಿವೇಶನರಹಿತರಿಗೆ ನಿವೇಶನ ಹಂಚಿಕೆ ಮಾಡಿ ಹೆಚ್ಚುವರಿಯಾಗಿ ಉಳಿದಿರುವ ನಿವೇಶನಗಳಲ್ಲಿಮಾತ್ರ ಸದರಿ ನಿವೇಶನರಹಿತರನ್ನು ಪರಿಗಣಿಸಬಹುದಾಗಿದೆ.
ಮನೆ ನಿವೇಶನವಿಲ್ಲದೆ ಸಾವಿರಾರು ಮಂದಿ ಬಡ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೊಂದು ನಿವೇಶನ ಜೊತೆಗೆ ಸೂರು ಕಲ್ಪಿಸಬೇಕೆಂಬುದು ನನ್ನ ಉದ್ದೇಶವಾಗಿದೆ. ಚುನಾವಣೆಗೆ ಮೊದಲು ನಾನು ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದೆ. ಇದಕ್ಕಾಗಿ ಈಗಾಗಲೇ ವಿವಿಧ ಗ್ರಾಮಗಳಲ್ಲಿ ೩೮೦ ಕ್ಕೂ ಮಿಕ್ಕಿ ಎಕ್ರೆ ಜಾಗವನ್ನು ಮೀಸಲಿಡಲಾಗಿದೆ. ಫಲಾನುಭವಿಗಳು ಬೇರೆ ಗ್ರಾಮಗಳಲ್ಲಿ ಅರ್ಜಿ ಸಲ್ಲಿಸುವಲ್ಲಿ ತಕರಾರು ಇದ್ದ ಕಾರಣ ನಾನು ಈ ಬಗ್ಗೆ ರಾಜೀವ ಗಾಂಧಿ ವಸತಿ ನಿಗಮದ ಅಧಿಕಾರಿ ಜೊತೆ ಚರ್ಚೆ ನಡೆಸಿದ್ದೆ. ಇಲಾಖೆ ಈ ವಿಚಾರದಲ್ಲಿ ಸೊತ್ತೋಲೆಯನ್ನು ಹೊರಡಿಸಿದ್ದು ಇನ್ನು ಮುಂದಿನ ದಿನಗಳಲ್ಲಿ ಯಾವುದೇ ನಿವೇಶನ ರಹಿತ ಫಲಾನುಭವಿಗಳು ನಿವೇಶನ ಇರುವ ಯಾವುದೇ ಗ್ರಾಮಗಳಲ್ಲಿ ಬೇಕಾದರೂ ಅರ್ಜಿ ಸಲ್ಲಿಸಬಹುದು.ಈ ಆದೇಶ ನನಗೆ ಅತ್ಯಂತ ಸಂತೋಷವನ್ನು ತಂದಿದೆ. ಬಡವರಿಗೆ ನಿವೇಶನ ಅಥವಾ ಮನೆ ಅಡಿಸ್ಥಳಕ್ಕೆ ಭೂಮಿ ನೀಡಬೇಕು ಎಂಬ ನನ್ನ ಆಸೆಗೆ ಸರಕಾರದ ಬೆಂಬಲವೂ ಸಿಕ್ಕಿದೆ. ಮುಂದೆ ಗ್ರಾಮಗಳಲ್ಲಿ ನಿವೇಶನ ಹಂಚಿಕೆ ಸುಲಭ ಸಾಧ್ಯವಾಗಿದ್ದು ನಿವೇಶನ ರಹಿತ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು.
ಅಶೋಕ್ ರೈ, ಶಾಸಕರು ಪುತ್ತೂರು






