
ಮಂಗಳೂರು: ಸುಲಿಗೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ವಾರಂಟ್ ಜಾರಿ ಸಿಬ್ಬಂದಿ ಬಂಧಿಸಿದ್ದಾರೆ.
ಬಂಧಿತನನ್ನು ನವೀನ್ ಸಿಕ್ವೇರಾ (52), ತಂದೆ ದಿವಂಗತ ಮೊಂತು ಸಿಕ್ವೇರಾ, ವಾಸ ತೊಕ್ಕೊಟ್ಟು ಚಂಬುಗುಡ್ಡೆ, ಪೆರ್ಮನ್ನೂರು ಅಂಚೆ, ಮಂಗಳೂರು ಎಂದು ಗುರುತಿಸಲಾಗಿದೆ. ಈತನ ವಿರುದ್ಧ 2011 ಹಾಗೂ 2012ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಠಾಣಾ ಅಕ್ರ.ಸಂ. 195/2011, ಐಪಿಸಿ ಕಲಂ 392 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2015ರಲ್ಲಿ ಆರೋಪಿಗೆ ಮೂರು ವರ್ಷಗಳ ಕಠಿಣ ಕಾರಾವಾಸ ಮತ್ತು ₹5,000 ದಂಡ ವಿಧಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಆರೋಪಿಯು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಕ್ರಿಮಿನಲ್ ರಿಟ್ ಪೆಟಿಷನ್ ಸಲ್ಲಿಸಿದ್ದನು. ಅರ್ಜಿ ಪರಿಶೀಲಿಸಿದ ಉಚ್ಚ ನ್ಯಾಯಾಲಯವು ಒಂದು ವರ್ಷದ ಸಾಧಾ ಕಾರಾವಾಸ ಮತ್ತು ₹15,000 ದಂಡ ವಿಧಿಸಿ, ಈ ಶಿಕ್ಷೆಯನ್ನು 2022ರೊಳಗೆ ಅನುಭವಿಸುವಂತೆ ಆದೇಶಿಸಿತ್ತು. ನಿಗದಿತ ಅವಧಿಯಲ್ಲಿ ಶಿಕ್ಷೆ ಅನುಭವಿಸದಿದ್ದಲ್ಲಿ ಜಿಲ್ಲಾ ನ್ಯಾಯಾಲಯದ ಹಿಂದಿನ ಆದೇಶದಂತೆ ಶಿಕ್ಷೆ ಅನುಭವಿಸಬೇಕೆಂದು ತಿಳಿಸಿತ್ತು.
ತೀರ್ಪು ಪ್ರಕಟವಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದರಿಂದ ಮಾನ್ಯ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ವಾರಂಟ್ ಜಾರಿ ಸಿಬ್ಬಂದಿಗಳಾದ ಎಎಸ್‌ಐ ಮಚ್ಚೆಂದ್ರನಾಥ್ ಜೋಗಿ, ಹೆಡ್‌ಕಾನ್ಸ್‌ಟೇಬಲ್ ಅಭಿಷೇಕ್ ಹಾಗೂ ನಾರಪ್ಪ ಕೆ.ಬಿ. ಅವರು ಖಚಿತ ಮಾಹಿತಿಯ ಮೇರೆಗೆ 2026 ಜನವರಿ 14ರಂದು ಸುರತ್ಕಲ್ ಹೊನ್ನಕಟ್ಟೆಯ ಸುಪ್ರಭಾತ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಆರೋಪಿಯನ್ನು ಬಂಧಿಸಿದರು.
ಬಂಧಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಹಿಂದಿನ ತೀರ್ಪಿನಂತೆ ಮೂರು ವರ್ಷಗಳ ಕಠಿಣ ಕಾರಾವಾಸ ಮತ್ತು ₹5,000 ದಂಡ ವಿಧಿಸಿ ಆದೇಶಿಸಿದೆ.






