ಪುತ್ತೂರು: ಸಂವಿಧಾನದ ಆಶಯ ಹಾಗೂ ನಿಯಮಾವಳಿಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಬಾರದು. ಸಂವಿಧಾನವನ್ನು ದುರ್ಬಲಗೊಳಿಸುವ ಶಕ್ತಿಗಳನ್ನು ತಡೆಯುವಲ್ಲಿ ಮಾಧ್ಯಮಗಳು ಜವಾಬ್ದಾರಿಯುತ ಪಾತ್ರ ವಹಿಸಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಶನಿವಾರ ಪುತ್ತೂರಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆದ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ (ಕೆ.ಯು.ಡಬ್ಲ್ಯು.ಜೆ ಘಟಕ) ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಮಹತ್ವ ಪಡೆದಿವೆ. ಶಾಸಕನಾಗಿ ಆಯ್ಕೆಯಾದ ಬಳಿಕ ಪುತ್ತೂರಿನ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡಲಾಗುತ್ತಿದೆ. ಈ ಕಾರ್ಯಗಳು ಜನರಿಗೆ ತಲುಪುವಲ್ಲಿ ಮಾಧ್ಯಮಗಳ ಪಾತ್ರ ನಿರ್ಣಾಯಕವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಶುಭ ಹಾರೈಸಿದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ್ ಮಾತನಾಡಿ, ಪತ್ರಕರ್ತರು ಸಮಾಜದ ಪ್ರತಿಯೊಂದು ಸಮಸ್ಯೆಗೆ ಧ್ವನಿಯಾಗಬೇಕು. ಪತ್ರಕರ್ತರಿಗೆ ಸಮಸ್ಯೆ ಎದುರಾದಾಗ ಸಮಾಜವೇ ಅವರ ಬೆಂಬಲಕ್ಕೆ ನಿಲ್ಲಬೇಕು. ಪೊಲೀಸರು ರಕ್ಷಣೆ ನೀಡುವಂತ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಶಿವಾನಂದ ಆಚಾರ್ಯ ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಶುಭ ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಅವರು ಪುತ್ತೂರು ಸಂಘದ ನೂತನ ಆಡಳಿತ ಮಂಡಳಿ ಹಾಗೂ ಕಾರ್ಯಕಾರಿಣಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಕಾರ್ಯದರ್ಶಿ ರಾಜೇಶ್ ಪೂಜಾರಿ ಶುಭ ಹಾರೈಸಿದರು. ನಿಕಟಪೂರ್ವ ಅಧ್ಯಕ್ಷ ಸಿದ್ದಿಕ್ ನೀರಾಜೆ ಅನಿಸಿಕೆ ವ್ಯಕ್ತಪಡಿಸಿದರು. ನೂತನ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಿ. ಶೇ. ಕಜೆಮಾರ್ ವಂದಿಸಿದರು. ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರ್ವಹಿಸಿದರು.
ಉಪಾಧ್ಯಕ್ಷರಾದ ಕರುಣಾಕರ ರೈ ಸಿ.ಎಚ್., ಎಂ.ಎಸ್. ಭಟ್, ಕಾರ್ಯದರ್ಶಿಗಳಾದ ಅಜಿತ್ ಕುಮಾರ್, ನಝೀರ್ ಕೋಲ, ಕಾರ್ಯಕಾರಿ ಸಮಿತಿ ಸದಸ್ಯರಾದ ಮೇಘ ಪಾಲೆತ್ತಾಡಿ, ಶಶಿಧರ ರೈ ಕುತ್ಯಾಳ, ಶೇಖ್ ಜೈನುದ್ದೀನ್, ಉಮಾಶಂಕರ್, ಲೋಕೇಶ್ ಬನ್ನೂರು, ಕೃಷ್ಣ ಪ್ರಸಾದ್, ರಾಜೇಶ್ ಪಟ್ಟೆ, ಶರತ್ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾ ರೆಡ್ಡಿ ಅವರು ಸೈಬರ್ ಹಾಗೂ ಇತರೆ ಅಪರಾಧ ಚಟುವಟಿಕೆಗಳ ನಿಯಂತ್ರಣ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಸಿದರು. ಇಂದಿನ ಯುವಪೀಳಿಗೆ ಅಧಃಪತನದತ್ತ ಸಾಗುತ್ತಿರುವುದು ಆತಂಕದ ವಿಷಯ. ಖಾಸಗಿ ಬದುಕಿನ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು. ತಂತ್ರಜ್ಞಾನ ನಮ್ಮ ಒಳಿತಿಗೆ ಬಳಕೆಯಾಗಬೇಕು ಎಂದು ಅವರು ಸಲಹೆ ನೀಡಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!