ಪುತ್ತೂರು: ಕನಸಿನ ಮನೆ ನಿರ್ಮಾಣ ಮತ್ತು ಅಲಂಕಾರಕ್ಕೆ ಅಗತ್ಯವಾದ ತಾಂತ್ರಿಕ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ‘ಬಿಲ್ಸ್‌ಟೆಕ್–2026’ ವಸ್ತು ಪ್ರದರ್ಶನವನ್ನು ಫೆಬ್ರವರಿ 21ರಿಂದ 23ರವರೆಗೆ ಪುತ್ತೂರು ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ (ACCEI) ಪುತ್ತೂರು ಸೆಂಟರ್ ಅಧ್ಯಕ್ಷ ಶಿವರಾಮ ಎಂ.ಎಸ್ ಹಾಗೂ ಯು.ಎಸ್. ಕಮ್ಯೂನಿಕೇಶನ್ ಸಂಸ್ಥೆಯ ಉಮಾಪತಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ತಾಂತ್ರಿಕ ಹಾಗೂ ಅಭಿಯಂತ್ರಿಕ ವಸ್ತು ಪ್ರದರ್ಶನದಲ್ಲಿ ಹೊಸ ಮನೆ ನಿರ್ಮಾಣ, ಈಗಾಗಲೇ ನಿರ್ಮಿಸಿದ ಮನೆಯನ್ನು ಆಧುನಿಕ ರೀತಿಯಲ್ಲಿ ಅಲಂಕರಿಸುವ ವಿಧಾನಗಳು ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ಲಭ್ಯವಾಗಲಿದೆ ಎಂದರು.
ಸುಮಾರು 70ಕ್ಕೂ ಹೆಚ್ಚು ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಗುಣಮಟ್ಟ ಆಧಾರಿತ ಮಾಹಿತಿ ನೀಡಲಿವೆ. ಸಿಮೆಂಟ್, ಬ್ರಿಕ್ಸ್, ಅಗ್ರಿಗೇಟ್, ಎಂ–ಸ್ಯಾಂಡ್, ಸ್ಟೀಲ್, ಪ್ಲಂಬಿಂಗ್ ಸಾಮಗ್ರಿಗಳು, ಟೈಲ್ಸ್, ಪ್ಲೈವುಡ್, ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್ ಪರಿಕರಗಳು, ಸೋಲಾರ್ ಹಾಗೂ ಎಲೆಕ್ಟ್ರಿಕಲ್ ಉತ್ಪನ್ನಗಳು, ಸೆಕ್ಯೂರಿಟಿ ಸಾಧನಗಳು, ಯುಪಿವಿಸಿ ಬಾಗಿಲು–ಕಿಟಕಿಗಳು, ಪೇಂಟ್, ಅಡ್ಹೆಸಿವ್, ವಾಟರ್ ಪ್ರೂಫಿಂಗ್ ಸೇರಿದಂತೆ ವಿವಿಧ ಉತ್ಪನ್ನಗಳ ನವೀನ ವಿನ್ಯಾಸಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಾಪರ್ಟಿ ಸಂಬಂಧಿತ ಮಳಿಗೆಗಳು ನಿವೇಶನ ಹಾಗೂ ಫ್ಲ್ಯಾಟ್ ಖರೀದಿಗೆ ಮಾರ್ಗದರ್ಶನ ನೀಡಲಿದ್ದು, ವಿಶೇಷ ಆಕರ್ಷಣೆಯಾಗಿ ಆಟೋ ಎಕ್ಸ್‌ಪೋ ಮೂಲಕ ವಿವಿಧ ವಾಹನಗಳ ಮಾರಾಟ ಮೇಳವೂ ನಡೆಯಲಿದೆ.
ಪ್ರದರ್ಶನವು ಪ್ರತಿದಿನ ಬೆಳಿಗ್ಗೆ 10.30ರಿಂದ ಸಂಜೆ 8.30ರವರೆಗೆ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕ ಅಶೋಕ್ ರೈ ಉದ್ಘಾಟಿಸಲಿದ್ದಾರೆ. ಮಹಾಲಿಂಗೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪುಡಾ ಅಧ್ಯಕ್ಷ ಅಮರ ರಾಮಚಂದ್ರ, ಲೋಕೋಪಯೋಗಿ ಇಲಾಖಾಧಿಕಾರಿ ರಾಜೇಶ್ ರೈ, ಡಾ. ಯು.ಪಿ. ಶಿವಾನಂದ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಸೆಂಟರ್ ಕಾರ್ಯದರ್ಶಿ ವೆಂಕಟರಾಜ್, ಸದಸ್ಯರಾದ ನವಿತಾ, ಚಂದ್ರಶೇಖರ ಆಳ್ವ ಹಾಗೂ ಸುದ್ದಿ ಮಾಹಿತಿ ಟ್ರಸ್ಟ್‌ನ ನಮಿತಾ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

Join WhatsApp Group
error: Content is protected !!