
ಪುತ್ತೂರು: ಬನ್ನೂರು ಪ್ರದೇಶದಲ್ಲಿರುವ ಮೆಸ್ಕಾಂ, ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಹಾಗೂ ಹೊಸದಾಗಿ ನಿರ್ಮಾಣಗೊಂಡ ನ್ಯಾಯಾಲಯ ಸಂಕೀರ್ಣಗಳಲ್ಲಿ ಸ್ಥಳೀಯ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ನೀಡುವಂತೆ ಆಗ್ರಹಿಸಿ ಎಸ್‌ಡಿಪಿಐ ಬನ್ನೂರು ಘಟಕ ಹೋರಾಟ ಆರಂಭಿಸುವುದಾಗಿ ತಿಳಿಸಿದೆ.
ನಗರದ ಬೆಳೆಯುತ್ತಿರುವ ಕೇಂದ್ರವಾಗಿರುವ ಬನ್ನೂರು ವ್ಯಾಪ್ತಿಗೆ ವಾರ್ಡ್ ಸಂಖ್ಯೆ 4, 5, 6 ಮತ್ತು 14 ಸೇರಿದ್ದು, ಇಲ್ಲಿ ಹಲವು ಪ್ರಮುಖ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಈ ಕಚೇರಿಗಳ ಮೂಲಕ ಉಂಟಾಗುವ ಗ್ರೂಪ್-ಡಿ ಹಾಗೂ ಇತರೆ ಸಹಾಯಕ ಹುದ್ದೆಗಳಲ್ಲಿ ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು ಎಂದು ಘಟಕ ಒತ್ತಾಯಿಸಿದೆ.
ಕರ್ನಾಟಕದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಕುರಿತು ಸರೋಜಿನಿ ಮಹಿಷಿ ವರದಿ ಶಿಫಾರಸುಗಳನ್ನು ಉಲ್ಲೇಖಿಸಿದ ಎಸ್‌ಡಿಪಿಐ, ಅದೇ ಮನೋಭಾವದಲ್ಲಿ ಬನ್ನೂರಿನ ಸಂಸ್ಥೆಗಳಲ್ಲೂ ಸುತ್ತಮುತ್ತಲಿನ ವಾರ್ಡ್‌ಗಳ ಯುವಕರಿಗೆ ಅವಕಾಶ ಕಲ್ಪಿಸುವುದು ಅಗತ್ಯವೆಂದು ಹೇಳಿದೆ.
ಘಟಕದ ವಾರ್ಡ್ ಅಧ್ಯಕ್ಷ ಪವಾಜ್ ಹುಸೇನ್ ಮಾತನಾಡಿ, “ಮೆಸ್ಕಾಂ, ಆರ್‌ಟಿಒ ಹಾಗೂ ನ್ಯಾಯಾಲಯ ಸಂಕೀರ್ಣದಲ್ಲಿ ಔಟ್‌ಸೋರ್ಸ್ ಮತ್ತು ಗುತ್ತಿಗೆ ಆಧಾರಿತ ಹುದ್ದೆಗಳಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಬೇಕು. ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿದ್ದು, ಸ್ಥಳೀಯ ಅಭ್ಯರ್ಥಿಗಳಿಗೆ ಸೂಕ್ತ ಮಾಹಿತಿ ನೀಡಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
ಸ್ಥಳೀಯ ಯುವಕರ ನ್ಯಾಯಸಮ್ಮತ ಬೇಡಿಕೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವ ಉದ್ದೇಶದಿಂದ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಹೋರಾಟ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕರು ಈ ಹೋರಾಟಕ್ಕೆ ಬೆಂಬಲ ನೀಡುವಂತೆ ಎಸ್‌ಡಿಪಿಐ ಮನವಿ ಮಾಡಿದೆ.









