ಚಿ ಕ್ಕಮಗಳೂರು : ಜಿಲ್ಲೆಯ ಕಡೂರು ತಾಲ್ಲೂಕಿನ ಶಿವಪುರ ಗ್ರಾಮದ ಕಲ್ಲೇಗೌಡ ಎಂಬುವವರು ಸೈಬರ್ ವಂಚಕರ (Cyber crime) ಜಾಲಕ್ಕೆ ಸಿಲುಕಿ ಬರೋಬ್ಬರಿ 1.28 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ (Facebook) ಕಂಡ ಒಂದು ಜಾಹೀರಾತಿನ ಲಿಂಕ್ (Link) ಒತ್ತಿದ ಇವರು, ವಂಚಕರು ಸೃಷ್ಟಿಸಿದ್ದ ವಾಟ್ಸಾಪ್ ಗುಂಪಿಗೆ ಸೇರಿಕೊಂಡಿದ್ದರು.
ಆರಂಭದಲ್ಲಿ ಕೇವಲ 60 ಸಾವಿರ ರೂಪಾಯಿ ಹೂಡಿಕೆ ಮಾಡಿದಾಗ, ಅವರಿಗೆ ಸುಮಾರು 17 ಸಾವಿರ ರೂಪಾಯಿ ಲಾಭ ಬಂದಂತೆ ತೋರಿಸಿ ನಂಬಿಕೆ ಹುಟ್ಟಿಸಲಾಗಿತ್ತು. ಈ ಆಮಿಷಕ್ಕೆ ಒಳಗಾದ ಅವರು, ಹಂತ ಹಂತವಾಗಿ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಿದ್ದರು. ಆದರೆ, ಕೊನೆಗೆ ಲಾಭದ ಹಣವಾಗಲಿ ಅಥವಾ ತಾವು ಹೂಡಿಕೆ ಮಾಡಿದ ಅಸಲಾಗಲಿ ಹಿಂಪಡೆಯಲು ಸಾಧ್ಯವಾಗದಿದ್ದಾಗ ತಮಗೆ ಮೋಸವಾಗಿರುವುದು ದೃಢಪಟ್ಟಿದೆ.
ಸದ್ಯ ಸಂತ್ರಸ್ತ ವ್ಯಕ್ತಿಯು ತಮಗಾದ ವಂಚನೆಯ ಬಗ್ಗೆ ಚಿಕ್ಕಮಗಳೂರಿನ ಸೈಬರ್ ಕ್ರೈಮ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪರಿಚಿತ ವಂಚಕರ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸಾರ್ವಜನಿಕರು ಅಪರಿಚಿತ ಆನ್‌ಲೈನ್ ಲಿಂಕ್‌ಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ತಿಳಿಸಿದ್ದಾರೆ.














