ಸ್ವಿಮಿಂಗ್‌ ಪೂಲ್‌ನಲ್ಲಿ ಮುಳುಗಿ 22 ವರ್ಷದ ಯುವಕ ಸಾವನಪ್ಪಿರುವ ಆಘಾತಕಾರಿ ಘಟನೆ ಗುಜರಾತ್‌ನ ಸೂರತ್‌ನಲ್ಲಿರುವ ಅಕ್ಷಯ್ ರೆಸಾರ್ಟ್‌ನಲ್ಲಿ ನಡೆದಿದೆ. ಸೂರತ್‌ನ ಪಾಂಡೇಸರ ನಿವಾಸಿ ಪುರುಷೋತ್ತಮ್ ಅಶೋಕಭಾಯ್ ಚೌಧರಿ ಮೃತಪಟ್ಟ ಯುವಕ.

ಘಟನೆ ಮಾರ್ಚ್ 23ರಂದು ನಡೆದಿದ್ದು, ವಿಡಿಯೋ ತಡವಾಗಿ ಬೆಳಕಿಗೆ ಬಂದಿದೆ. ಸೂರತ್‌ನ ಯುವಕರ ಗುಂಪೊಂದು ರಜೆಯ ದಿನವನ್ನು ಕಳೆಯಲು ರೆಸಾರ್ಟ್‌ಗೆ ಭೇಟಿ ನೀಡಿತ್ತು. ಆ ಪೈಕಿ 22 ವರ್ಷದ ಪುರುಷೋತ್ತಮ್ ಚೌಧರಿ ಕೂಡ ಇದ್ದ. ಆತ ಮಧ್ಯಾಹ್ನದ ಸುಮಾರಿಗೆ ತಮ್ಮ ಸ್ನೇಹಿತನ ಜತೆ ಈಜುಕೊಳಕ್ಕೆ ತೆರಳಿದ್ದ. ಈ ವೇಳೆ ದುರಂತ ಸಂಭವಿಸಿದೆ.

ಸಿಸಿಟಿವಿ ಕ್ಯಾಮರಾದಲ್ಲಿ ಈ ಭಯಾನಕ ದೃಶ್ಯ ರೆಕಾರ್ಡ್ ಆಗಿದ್ದು, ಈಜುಕೊಳದೊಳಗೆ ಪುರುಷೋತ್ತಮ್ ಚೌಧರಿ ಸಂಕಷ್ಟದಲ್ಲಿ ಸಿಲುಕಿರುವುದು ಕಂಡುಬಂದಿದೆ. ಆತ ನೀರಿನಲ್ಲಿ ತನ್ನ‌ ಪ್ರಾಣ ಉಳಿಸಿಕೊಳ್ಳಲು ಹೋರಾಡಿದ್ದಾನೆ. ಆದರೆ, ಅಲ್ಲಿದ್ದ ಆತನ ಸ್ನೇಹಿತರು ಇದನ್ನು ಗಮನಿಸರಲಿಲ್ಲ. ಆತ ನೀರಿನೊಳಗೆ ಪ್ರಜ್ಞೆ ತಪ್ಪಿ ಬಿದ್ದ ನಂತರವಷ್ಟೇ ಈ ವಿಚಾರ ಬೆಳಕಿಗೆ ಬಂದಿದೆ. ನಂತರ ಆತನ ಸ್ನೇಹಿತರು ಇದನ್ನು ಗಮನಿಸಿ, ನೀರಿನಿಂದ ಹೊರ ತೆಗೆದು ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ದಿದ್ದಾರೆ.

ಪುರುಷೋತ್ತಮ್‌ನನ್ನು ಉಳಿಸಲು ಪ್ರಯತ್ನಿಸಿದರೂ ಆಸ್ಪತ್ರೆಗೆ ತಲುಪಿದಾಗ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅಧಿಕಾರಿಗಳು ಈ ಸಾವು ನೀರಿನಲ್ಲಿ ಮುಳುಗಿ ಸಂಭವಿಸಿದೆ ಎಂದು ದೃಢ ಪಡಿಸಿದ್ದಾರೆ. ಓಲ್ಪಾಡ್ ಪೊಲೀಸರು ಈ ಸಾವಿನ ಪ್ರಕರಣವನ್ನು ದಾಖಲಿಸಿದ್ದು, ಅಧಿಕಾರಿಗಳು ಸಿಸಿಟಿವಿ ರೆಕಾರ್ಡಿಂಗ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!