ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ನಡೆದ ಕಾಣಿಕೆ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 3ರಂದು ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿ, ಮೂರು ಕಾಣಿಕೆ ಹುಂಡಿಗಳಲ್ಲಿದ್ದ ಸುಮಾರು ₹25 ಸಾವಿರ ನಗದು ಕಳವು ಮಾಡಿದ್ದನು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು.
ಖಚಿತ ಮಾಹಿತಿಯ ಮೇರೆಗೆ ಮಾರ್ಚ್ 31ರಂದು ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯ ನಿವಾಸಿ ಶಬಿಕ್ ಅಹಮ್ಮದ್ ಶೇಖ್ ಅಬ್ದುಲ್ ಖಾದರ್ (25) ಅವರನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಆತನು ಕಳವು ನಡೆಸಿರುವುದನ್ನು ಒಪ್ಪಿಕೊಂಡಿದ್ದು, ಕಳವಾಗಿದ್ದ ಕಾಣಿಕೆ ಹುಂಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕಳವು ಪ್ರಕರಣದಲ್ಲೂ ಸಂಪರ್ಕವಿದೆ. ಇದೇ ವರ್ಷ ಫೆಬ್ರವರಿ ತಿಂಗಳ ಕೊನೆಯಲ್ಲಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಕೂರು–ಜೊಕಟ್ಟೆ ಪ್ರದೇಶದಲ್ಲಿ ನಡೆದ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ಕಳವು ಪ್ರಕರಣದಲ್ಲಿಯೂ ಆತ ಭಾಗಿಯಾಗಿರುವುದು ತಿಳಿದುಬಂದಿದೆ.
ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕಳವು ನಡೆಸಿ ಮತ್ತೆ ಅಲ್ಲಿಗೆ ಮರಳುತ್ತಿದ್ದ ಪ್ರವೃತ್ತಿ ಆರೋಪಿಗೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕ ಬಾಲಕೃಷ್ಣ ಅವರ ನೇತೃತ್ವದಲ್ಲಿ ಕ್ರೈಂ ಸಿಬ್ಬಂದಿಗಳಾದ ನೂತನ್, ರಾಜೇಶ್ ಹಾಗೂ ಪ್ರಕಾಶ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!