ದಾವಣಗೆರೆ ದಕ್ಷಿಣ ಕ್ಷೇತ್ರದ ಬೆಳವಣಿಗೆ ಆಧಾರದಲ್ಲಿ ಸಚಿವ ಜಮೀರ್ ಅಹಮ್ಮದ್ ತಲೆದಂಡವಾದರೆ ವಿಧಾನಸಭೆ ಚುನಾವಣೆ-2028ರಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ 20-30 ಕ್ಷೇತ್ರಗಳನ್ನು ಗೆಲ್ಲುವುದೂ ಕಷ್ಟವಾದೀತು.
ಮುಸ್ಲಿಂ ಸಮುದಾಯವೇ ಕಾಂಗ್ರೆಸ್ಸಿನಿಂದ ದೂರವಾಗುತ್ತದೆ ಎಂದು ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಸುಭಾನ್ ಖಾನ್ ಎಚ್ಚರಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆ.ಅಬ್ದುಲ್ ಜಬ್ಬಾರ್, ದಕ್ಷಿಣ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹಮ್ಮದ್‌ಗೆ ತಲೆದಂಡ ಮಾಡಿದ ಕಾಂಗ್ರೆಸ್ ಪಾಠ ಕಲಿಯದಿದ್ದರೆ, ಮುಸ್ಲಿಂ ಸಮುದಾಯ ಪಾಠ ಕಲಿಸುವ ಕೆಲಸ ಮಾಡುತ್ತದೆ ಎಂದರು.
ಮುಸ್ಲಿಂ ನಾಯಕರಿಗೆ ತೊಂದರೆ ನೀಡಿದರೆ ಕಾಂಗ್ರೆಸ್ಸಿಂದ ದೂರ ಸರಿದು, ಪ್ರಾದೇಶಿಕ ಪಕ್ಷ ಹುಟ್ಟು ಹಾಕುತ್ತೇವೆ. ಮುಸ್ಲಿಂ ಸೇರಿದಂತೆ ಅಹಿಂದ ವರ್ಗ ಸೇರಿದಂತೆ ಎಲ್ಲ ಜಾತಿ, ಸಮುದಾಯ ಒಳಗೊಂಡಂತೆ ಕಾಂಗ್ರೆಸ್- ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳು, ಜೆಡಿಎಸ್‌ನಂತಹ ಪ್ರಾದೇಶಿಕ ಪಕ್ಷಕ್ಕೆ ಪರ್ಯಾಯ ಶಕ್ತಿಯ ಉದಯವಾಗಲಿದೆ. ವಿಶ್ವ ಮುಸ್ಲಿಂ ಪರಿಷತ್ ರಾಜಕೀಯ ಪಕ್ಷವಾಗಿ ಮಾಡುತ್ತೇವೆ. ಜಮೀರ್ ಅಹ್ಮದ್ ಅವರನ್ನೇ ಕರೆಸಿ ಲಕ್ಷಾಂತರ ಜನರ ಸೇರಿಸಿ, ಸಮಾವೇಶ ಮಾಡುತ್ತೇವೆ. ಜಮೀರ್ ಅವರನ್ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಜಮೀರ್ ಅಹಮ್ಮದ್ ತಲೆದಂಡವಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನೆಲ ಕಚ್ಚಲಿದೆ. ಕೆ.ಅಬ್ದುಲ್ ಜಬ್ಬಾರ್ ಅವರಿಗೆ ಏನಾದರೂ ತೊಂದರೆಯಾದರೆ ಕಾಂಗ್ರೆಸ್ ದಾವಣಗೆರೆ ನಗರ, ಜಿಲ್ಲೆಯಲ್ಲಷ್ಟೇ ಅಲ್ಲ, ಎಲ್ಲ ಕಡೆ ಸರ್ವನಾಶವಾಗುತ್ತದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ವಿರುದ್ಧ ಅಬ್ದುಲ್ ಜಬ್ಬಾರ್ ಪಕ್ಷವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ತೆಗೆದು ಹಾಕಿದ್ದು ಖಂಡನೀಯ ಎಂದು ಅವರು ತಿಳಿಸಿದರು.
ನಸೀರ್ ಅಹಮ್ಮದ್ ಅವರಿಂದ ಬಲವಂತದಿಂದ ರಾಜೀನಾಮೆ ಪಡೆಯಲಾಗಿದೆ. ಇದೀಗ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹಮ್ಮದ್ ತಲೆದಂಡ ಮಾಡಿದರೆ ಕರ್ನಾಟಕ, ತೆಲಂಗಾಣದಲ್ಲಿ ಇರುವಂತಹ ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚಲಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕಡೆಗಣಿಸಿದರೆ, ರಾಜಕೀಯವಾಗಿ ಮುಗಿಸಲು ಹೊರಟರೆ ಅದೇ ಕಾಂಗ್ರೆಸ್ ಕೈಕಟ್ಟಿಕೊಂಡು ಕೂಡುವ ಸ್ಥಿತಿ ತಂದುಕೊಳ್ಳುತ್ತದೆ. ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ಸೋಲನುಭವಿಸಲಿದೆ ಎಂದು ಸುಭಾನ್ ಖಾನ್ ಹೇಳಿದರು.
ಈ ಸಂದರ್ಭ ಪರಿಷತ್ ಮುಖಂಡರಾದ ಪರ್ವೇಜ್, ಮಂಜುನಾಥ, ಅಲ್ಲಾಭಕ್ಷಿ ಇದ್ದರು














