ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು (By election) ಈಗ ರಾಜ್ಯ ರಾಜಕಾರಣದ ಕುತೂಹಲದ ಕೇಂದ್ರವಾಗಿದೆ. ಈ ಚುನಾವಣೆ ಕಾಂಗ್ರೆಸ್ (Congress) ಪಕ್ಷದ ಇಬ್ಬರು ಪ್ರಬಲ ನಾಯಕರ ನಡುವಿನ ಪ್ರತಿಷ್ಠೆಯ ಹೋರಾಟವಾಗಿ ಮಾರ್ಪಟ್ಟಿದೆ.
ಅಭ್ಯರ್ಥಿ ಸಮರ್ಥ್ ಶಾಮನೂರು (Samarth shamanuru) ಪರವಾಗಿ ಪ್ರಚಾರ ಮಾಡಲು ಆಗಮಿಸಿದ್ದ ಸಚಿವ ಜಮೀರ್ ಅಹ್ಮದ್ ಖಾನ್ (Zameer ahmed khan) ಕೇವಲ ಒಂದು ಸುದ್ದಿಗೋಷ್ಠಿಗೆ ಮಾತ್ರ ತಮ್ಮ ಭೇಟಿಯನ್ನು ಸೀಮಿತಗೊಳಿಸಿ ನಿರ್ಗಮಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಜಮೀರ್ ಅಹ್ಮದ್ ನಡುವೆ ಉಂಟಾಗಿದ್ದ ಮಾತಿನ ಚಕಮಕಿಯು ಅಲ್ಪಸಂಖ್ಯಾತ ನಾಯಕರಲ್ಲಿ ಅಸಮಾಧಾನ ಮೂಡಿಸಿತ್ತು. ತಾವು ಕೇರಳ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಕಾರಣ ಬರಲು ತಡವಾಯಿತು ಎಂದು ಜಮೀರ್ ಸ್ಪಷ್ಟನೆ ನೀಡಿದ್ದರೂ, ಅವರು ಬೀದಿಗಿಳಿದು ಮತ ಯಾಚಿಸದೇ ಹೋದದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಇಂದು (ಏ.5) ಸಚಿವ ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಭೋಜನ ಸವಿದು ಸಮರ್ಥ್ ಗೆಲ್ಲುತ್ತಾರೆ ಎಂದು ಜಮೀರ್ ಹೇಳಿಕೆ ನೀಡಿದರಾದರೂ, ಅವರ ಈ ಮಿಂಚಿನ ಭೇಟಿಯು ಮುಖಂಡರ ನಡುವಿನ ಸಂಬಂಧ ಅಷ್ಟೊಂದು ಸುಗಮವಾಗಿಲ್ಲ ಎಂಬುದನ್ನು ಸೂಚಿಸುತ್ತಿದೆ. ಜಮೀರ್ ಅವರ ಅಬ್ಬರದ ಪ್ರಚಾರವನ್ನು ನಿರೀಕ್ಷಿಸಿದ್ದ ಕಾರ್ಯಕರ್ತರಿಗೆ ಈ ಬೆಳವಣಿಗೆಯು ತೀವ್ರ ನಿರಾಸೆ ಮೂಡಿಸಿದೆ.














