ಪುತ್ತೂರು: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಹಿನ್ನಲೆಯಲ್ಲಿ ಮಧುರೈ ಜಿಲ್ಲೆಯ ಮಧುರೈ ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಭಾರಿಯಾಗಿ ಪುತ್ತೂರಿನ ಅಕ್ಷಯ್ ರೈ ದಂಬೆಕಾನಾ ಅವರನ್ನು ಆಯ್ಕೆ ಮಾಡಲಾಗಿದೆ.
ಅಕ್ಷಯ್ ರೈ ಅವರು ಈ ಹಿಂದೆ 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕನ್ಯಾಕುಮಾರಿ ಜಿಲ್ಲೆಯ ಕೊಳಚಿಲ್ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ಹೊತ್ತಿದ್ದರು. ನಂತರ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಪ್ರಸ್ತುತ ಅವರು ಬಿಜೆಪಿ ರಾಜ್ಯ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ವಿವಿಧ ರಾಜ್ಯಗಳಲ್ಲಿ ಚುನಾವಣಾ ಪ್ರಭಾರಿಯಾಗಿ ಕೆಲಸ ಮಾಡಿದ ಅನುಭವದ ಹಿನ್ನೆಲೆಯಲ್ಲಿ ಅವರಿಗೆ ಮತ್ತೆ ತಮಿಳುನಾಡಿನಲ್ಲಿ ಮಹತ್ವದ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಅಕ್ಷಯ್ ರೈ ಅವರು ಈ ಹಿಂದೆ ಬೆಂಗಳೂರು ಕಂಬಳ ಆಯೋಜಕರಲ್ಲಿ ಪ್ರಮುಖರಾಗಿದ್ದು, ಬೆಂಗಳೂರು ಕಂಬಳ ಸಮಿತಿಯ ಆರ್ಗನೈಸಿಂಗ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮಿಳು ಭಾಷೆಯಲ್ಲಿ ಹಿಡಿತ ಹಾಗೂ ತಮಿಳು ಸಂಘ–ಸಂಸ್ಥೆಗಳೊಂದಿಗೆ ಹೊಂದಿರುವ ನಿಕಟ ಸಂಪರ್ಕವು ಅವರ ನೇಮಕಾತಿಗೆ ಸಹಾಯಕವಾಗಿದೆ ಎನ್ನಲಾಗಿದೆ.














