ಪುತ್ತೂರು: ರಾಜ್ಯದ ಪ್ರತಿ ಜಿಲ್ಲೆಗಳಿಗೂಂದು ಶ್ರಮಿಕ ಶಾಲೆ ಮಂಜೂರು ಮಾಡುತ್ತಿದೆ. ಮೂಡಬಿದರೆಯವರು ಬಹಳಷ್ಟು ಪ್ರಯತ್ನಪಟ್ಟಿದ್ದರು. ಆದರೆ ಪುತ್ತೂರಿನಲ್ಲಿ ಎಲ್ಲರ ಸಹಕಾರದೊಂದಿಗೆ ಶೀಘ್ರದಲ್ಲಿ ಜಾಗ ಮಂಜೂರುಗೊಳಿಸಿರುವುದರಿಂದ ಪುತ್ತೂರಿಗೆ ಶ್ರಮಿಕ ವಸತಿ ಶಾಲೆ ಮಂಜೂರಾಗಿದೆ. ಜಿಲ್ಲಾ ಕೇಂದ್ರದಲ್ಲಿ ಮಾತ್ರವೇ ಮಂಜೂರುಗೊಳಿಸಲು ಅವಕಾಶವಿದ್ದು ರಾಜ್ಯದಲ್ಲಿ ತಾಲೂಕು ಕೇಂದ್ರಕ್ಕೆ ಮಂಜೂರಾಗಿರುವುದು ಪುತ್ತೂರಿಗೆ ಮಾತ್ರ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಿಂದ ಕುರಿಯದಲ್ಲಿ ರೂ.೩೭.೬೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರಮಿಕ ವಸತಿ ಶಾಲಾ ಕಟ್ಟಡಕ್ಕೆ ಎ.೨೦ರಂದು ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಬಡ ಕಾರ್ಮಿಕರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆತು ಅವರೂ ಸಮಾಜದಲ್ಲಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಕಾರ್ಮಿಕರ ಶ್ರಮಿಕ ವಸತಿ ಶಾಲೆ ಮಂಜೂರುಗೊಳಿಸಲಾಗಿದೆ. ಈ ಶಾಲೆಯಲ್ಲಿ ಕಾರ್ಮಿಕರ ಗುರುತಿನ ಚೀಟಿ ಹೊಂದಿರುವ ಕಾರ್ಮಿಕರ ಮಕ್ಕಳಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶವಿದೆ. ಹೀಗಾಗಿ ಕಾರ್ಮಿಕರಾಗಿರುವವರು ಕಾರ್ಮಿಕರ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು. ಬಹುತೇಕವಾಗಿ ೬-೧೨ ತರಗತಿ ತನಕದ ಶಾಲೆಗಳು ಗರೀಷ್ಠ ೧೦ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಮಾತ್ರ ಇರುತ್ತದೆ. ಆದರೆ ಶ್ರಮಿಕ ಶಾಲೆ ೭೧.ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಿದೆ. ಶ್ರಮಿಕ ಶಾಲಾ ಸೌಲಭ್ಯದ ಕುರಿತು ಕಾರ್ಮಿಕರಿಗೆ ಮಾಹಿತಿ ನೀಡಿ ಮಕ್ಕಳನ್ನು ಶ್ರಮಿಕ ಶಾಲೆಗೆ ದಾಖಲಾತಿ ಮಾಡಿಸುವಂತೆ ಮಾಡಬೇಕು ಎಂದು ಹೇಳಿದರು.
ಹಿಂದಿನವರಂತೆ ತೆಂಗಿನಕಾಯಿ ಒಡೆಯವುದು ಮಾತ್ರವಲ್ಲ:
ಬಜತ್ತೂರಿನ ವಸತಿ ನಿಲಯಕ್ಕೂ ಟೆಂಡರ್ ಆಗಿದೆ. ಜೊತೆಗೆ ರೂ.೧೦ಕೋಟಿಯ ಮುಂಡೂರಿನ ತಾಲೂಕು ಕ್ರೀಡಾಂಗಣ, ರೂ.೮೫.೫೦ಕೋಟಿಯ ಆರ್‌ಟಿಓ ಟ್ರಾಕ್‌ಗಳಿಗೂ ಮುಂದಿನ ಎರಡು ತಿಂಗಳಲ್ಲಿ ಶಿಲಾನ್ಯಾಸ ನೆರವೇರಿಸಿ ಮುಂದಿನ ಎರಡು ವರ್ಷದಲ್ಲಿ ಉದ್ಘಾಟನೆಗೊಳ್ಳಲಿದೆ. ನಾವು ಹಿಂದಿನವರಂತೆ ತೆಂಗಿನಕಾಯಿ ಒಡೆಯುವುದು ಮಾತ್ರವಲ್ಲ. ನಾವು ತೆಂಗಿನಕಾಯಿ ಒಡೆದು ಉದ್ಘಾಟನೆ ಮಾಡಿ ಲೋಕಾರ್ಪಣೆ ಮಾಡುವ ಮೂಲಕ ಜನರ ವಿಶ್ವಾಸ ಗಳಿಸಲಿದ್ದೇವೆ ಎಂದು ಶಾಸಕರು ಹೇಳಿದರು.
ಗ್ರಾ.ಪಂ ಸದಸ್ಯರಿಗೆ ಪರಿಚಯವೇ ಇಲ್ಲದ ರಸ್ತೆಗಳು ಶಾಸಕರಿಂದ ಅಭಿವೃದ್ಧಿ-ಎಂ.ಎಸ್ ಮಹಮ್ಮದ್:
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್ ಮಾತನಾಡಿ, ಪ್ರಥಮ ಬಾರಿಗೆ ಆಯ್ಕೆಯಾಗಿರುವ ಬಹುತೇಕ ಶಾಸಕರುಗಳು ವಿಧಾನ ಸೌಧ, ವಿಕಾಸ ಸೌಧದಲ್ಲಿರುವ ಎಲ್ಲಾ ಕೊಠಡಿಗಳಿಗೆ ಹೋಗಿರಲಿಕ್ಕಿಲ್ಲ. ಆದರೆ ನಮ್ಮ ಶಾಸಕರು ಯಾವ ಇಲಾಖೆ ಎಲ್ಲಿದೆ. ಯಾವ ಇಲಾಖೆಯಿಂದ ಎಷ್ಟು ಅನುದಾನ ಪಡೆಯಬಹುದು ಎಂಬುದನ್ನು ತಿಳಿದು ಹೋರಾಟ ಮಾಡಿ ಅನುದಾನ ತಂದು ಅಭಿವೃದ್ಧಿ ಮಾಡುತ್ತಿದ್ದಾರೆ. ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಅನುದಾನ ನೀಡುವ ಮೂಲಕ ಗ್ರಾ.ಪಂ ಸದಸ್ಯರಿಗೇ ಪರಿಚಯ ಇಲ್ಲದ ರಸ್ತೆಗಳು ಅಭಿವೃದ್ಧಿಯಾಗುತ್ತಿದೆ. ಶಾಸಕರ ಇಚ್ಚಾಶಕ್ತಿಯ ಫಲವಾಗಿ ಪುತ್ತೂರಿಗೆ ಶ್ರಮಿಕ ಶಾಲೆ ಮಂಜೂರುಗೊಂಡಿದ್ದು ಕಷ್ಟದಲ್ಲಿರುವ ಕಾರ್ಮಿಕರ ಮಕ್ಕಳು ವಿದ್ಯಾವಂತರಾಗಲು ಸಹಕಾರಿಯಾಗಲಿದೆ ಎಂದರು.
ರೂ.೨,೮೦೦ಕೋಟಿ ಅನುದಾನ ತಂದಿರುವ ರಾಜ್ಯದ ಏಕೈಕ ಶಾಸಕ-ಕೃಷ್ಣಪ್ರಸಾದ್ ಆಳ್ವ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಶಾಸಕರಾಗಿ ಅಶೋಕ್ ಕುಮಾರ್ ರೈಯವರು ಮಾಡಿದ ಅಭಿವೃದ್ದಿ ಕೆಲಸಗಳು ರಾಜ್ಯವೇ ಬೆರಗಾಗಿದೆ. ೨೨೪ ಕ್ಷೇತ್ರಗಳು ೨ ವರ್ಷದಲ್ಲಿ ೨,೮೦೦ಕೋಟಿ ರೂಪಾಯಿ ತಂದಿರುವ ರಾಜ್ಯದ ಏಕೈಕ ಶಾಸಕರಾಗಿದ್ದಾರೆ. ಅವರ ವಿಶೇಷ ಮುತುವರ್ಜಿಯಲ್ಲಿ ಶ್ರಮಿಕ ಶಾಲೆ ಮಂಜೂರಾಗಿದೆ. ಇಂತಹ ಶಾಸಕರನ್ನು ಪಡೆದಿರುವ ನಾವು ಭಾಗ್ಯವಂತರು. ಪಾದರಸದಂತೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಅಶೋಕ್ ಕುಮಾರ್ ರೈಯವರು ಮುಂದಿನ ಬಾರಿ ಸಚಿವರಾಗಿ ಬರಬೇಕು ಎಂದರು.
ಶ್ರಮಿಕ ಶಾಲೆಯು ಪುತ್ತೂರಿನ ಅಭಿವೃದ್ಧಿ ಇನ್ನೊಂದು ಮುಕುಟ-ಡಾ.ರಾಜಾರಾಮ ಕೆ.ಬಿ.:
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ. ಮಾತನಾಡಿ, ಪುತ್ತೂರು ಅಭಿವೃದ್ಧಿ ಪರತವದಲ್ಲಿ ಮುನ್ನಡೆಯುತ್ತಿದೆ. ಶಾಸಕರ ಅಭಿವೃದ್ಧಿ ಕಾರ್ಯಗಳಿಂದ ಪುತ್ತೂರು ರಾಜ್ಯದಲ್ಲಿ ಗುರುತಿಸಲ್ಪಡುವ ಕ್ಷೇತ್ರವಾಗಿದರ. ಕಾರ್ಮಿಕರ ಮಕ್ಕಳಿಗಾಗಿರುವ ಶ್ರಮಿಕ ಶಾಲೆಯು ಪುತ್ತೂರಿನ ಅಭಿವೃದ್ಧಿ ಇನ್ನೊಂದು ಮುಕುಟವಾಗಿದೆ. ಇದು ಬಡ ವಿದ್ಯಾರ್ಥಿಗಳಿಗೆ ಆಸರೆ ಅಗಲಿದೆ ಎಂದರು.
ಕುರಿಯ ಗ್ರಾಮವನ್ನು ಗುರುತಿಸುವಂತೆ ಮಾಡಿದ್ದಾರೆ-ಶಿವರಾಮ ಆಳ್ವ:
ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು ಮಾತನಾಡಿ, ಸರಕಾರಿ ಮೆಡಿಕಲ್ ಕಾಲೇಜು ಮಂಜೂರುಗೊಳಿಸಿ ಪುತ್ತೂರನ್ನು ರಾಜ್ಯದಲ್ಲಿ ಗುರುತಿಸುವಂತೆ ಮಾಡಿದ ಶಾಸಕ ಅಶೋಕ್ ಕುಮಾರ್ ರೈಯವರು ಕಾರ್ಮಿಕ ಇಲಾಖೆಯ ಶ್ರಮಿಕ ಶಾಲೆಯನ್ನು ಮಂಜೂರುಗೊಳಿಸುವ ಮೂಲಕ ತಾಲೂಕಿನಲ್ಲಿಯೇ ಕುರಿಯ ಗ್ರಾಮವನ್ನು ಗುರುತಿಸುವಂತೆ ಮಾಡಿದ್ದಾರೆ. ಕುರಿಯದಲ್ಲಿ ರಸ್ತೆ, ನೀರು ಸೇರಿದಂತೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವಂತೆ ವಿನಂತಿಸಿದರು.
ಜಿಲ್ಲೆಗೆ ಎರಡನೇ ಬೆಂಚ್‌ಮಾರ್ಕ್ ತಂದವರು ಅಶೋಕ್ ರೈ-ಉಮಾನಾಥ ಶೆಟ್ಟಿ:
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ವೀರಪ್ಪ ಮೊಯಿಲಿ ಅವರು ಸಿಇಟಿ ಜಾರಿಗೆ ತಂದು ಜನ ಸಾಮಾನ್ಯರಿಗೂ ಮೆಡಿಕಲ್, ಇಂಜಿನಿಯರಿಂಗ್ ಪದವಿ ಪಡೆಯಲು ಅನುಕೂಲ ಕಲ್ಪಿಸಿರುವಂತೆ ಶಾಸಕ ಅಶೋಕ್ ಕುಮಾರ್ ರೈಯವರು ಮೆಡಿಕಲ್ ಕಾಲೇಜು ಮಂಜೂರುಗೊಳಿಸುವ ಮೂಲಕ ಜಿಲ್ಲೆಯ ಎರಡನೇ ಬೆಂಚ್ ಮಾರ್ಕ್ ಮಾಡಿದ್ದಾರೆ. ಶಾಸಕರಾಗುವ ಮೊದಲೇ ಕಾರ್ಮಿಕರ ಮೇಲೆ ಕಾಲಜಿಯಿದ್ದ ಶಾಸಕರು, ಈಗ ಕಾರ್ಮಿಕರ ಮಕ್ಕಳಿಗಾಗಿರುವ ಶ್ರಮಿಕ ಶಾಲೆ ಮಂಜೂರುಗೊಳಿಸುವ ಮೂಲಕ ಕಾರ್ಮಿಕರ ಮಕ್ಕಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಇಂದು ಕಾರ್ಮಿಕರ ಮುಂದಿನ ಪೀಳಿಗೆಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ನಗರ ಯೋಜನಾ ಪ್ರಾಧೀಕಾರದ ಅಧ್ಯಕ್ಷ ಅಮಳ ರಾಮಚಂದ್ರ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ ತೌಸೀಫ್, ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರ್ಯಾಪು ಗ್ರಾ.ಪಂ ಮಾಜಿ ಸದಸ್ಯ ನೇಮಾಕ್ಷ ಸುವರ್ಣ ಸ್ವಾಗತಿಸಿ, ವಂದಿಸಿದರು. ಪಕ್ಷದ ಪ್ರಮುಖರಾದ ರಮೇಶ್ ರೈ ಡಿಂಬ್ರಿ, ಫಾರೂಕ್ ಬಾಯಬೆ, ಪೂರ್ಣೇಶ್ ಭಂಡಾರಿ, ಯಾಕೂಬ್ ಯಾನೆ ಸುಲೈಮಾನ್, ವಿಶ್ವಜಿತ್ ಅಮ್ಮುಂಜ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸತೀಶ್ ರೈ ನಿಡ್ಪಳ್ಳಿ, ಸದಾಶಿವ ರೈ ಗುಮ್ಮಟೆಗದ್ದೆ, ಗಿರೀಶ್ ರೈ ಮೂಲೆ, ಗೋಪಾಲಕೃಷ್ಣ ಗೌಡ, ಜಯಪ್ರಕಾಶ್ ರೈ, ಸೂಫಿ ಮೊದಲಾದವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸುರೇಂದ್ರ ರೈ, ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಮಾ, ಪುತ್ತೂರಿನ ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆ, ಕರ್ನಾಟಕ ರಾಜ್ಯ ಕಾರ್ಮಿಕ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿದ್ದಪ್ಪ, ಗುತ್ತಿಗೆದಾರ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


೧೮ ತಿಂಗಳಲ್ಲಿ ಲೋಕಾರ್ಪಣೆ
ರೂ. ೩೭.೬೫ ಕೋಟಿ ಶ್ರಮಿಕ ಶಾಲೆಗೆ ಶಿಲಾನ್ಯಾಸಗೊಂಡಿದೆ. ಈ ಶಾಲಾ ಕಟ್ಟಡವು ಮುಂದಿನ ೧೮ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಚುನಾವಣೆಗೆ ಮೊದಲು ಮಕ್ಕಳು ದಾಖಲಾತಿ ನಡೆಯಲಿದೆ. ಶ್ರಮಿಕ ಶಾಲೆಯಲ್ಲಿ ಎಲ್ಲಾ ವಿಷಯವಾರು ಶಿಕ್ಷಕರಿರುತ್ತಾರೆ. ಎಲ್ಲಾ ಶಿಕ್ಷಕರು ವಸತಿಯಲ್ಲಿರಲಿದ್ದಾರೆ. ಬಾಲಕ-ಬಾಲಕಿಯ ವಸತಿ ನಿಲಯ, ಶಿಕ್ಷಕರ ವಸತಿ ನಿಲಯ ಸೇರಿದಂತೆ ಒಟ್ಟು ಎಳೂವರೆ ಎಕರೆಯಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣಗೊಳ್ಳಲಿದೆ.
-ಅಶೋಕ್ ಕುಮಾರ್ ರೈ,ಶಾಸಕರು ಪುತ್ತೂರು

Leave a Reply

Your email address will not be published. Required fields are marked *

Join WhatsApp Group
error: Content is protected !!