ಮಂಗಳೂರು, ಏ.22: ತಣ್ಣೀರುಬಾವಿ ಬೀಚ್ ಸಮೀಪ ನಡೆದ ಸುಲಿಗೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಸೋಮವಾರಪೇಟೆ (ಮಡಿಕೇರಿ) ನಿವಾಸಿ ಅಜಯ್ ಕೆ. (29) ಅವರು ಏ.13ರಂದು ಸ್ನೇಹಿತರಾದ ರಮೇಶ್ ಹಾಗೂ ರಫೀಕ್ ಅವರೊಂದಿಗೆ ಹುಟ್ಟುಹಬ್ಬ ಆಚರಿಸಲು ಕಾರಿನಲ್ಲಿ ತಣ್ಣೀರುಬಾವಿ ಬೀಚ್‌ಗೆ ಬಂದಿದ್ದರು. ಬೆಳಗಿನ ಜಾವ ಸುಮಾರು 2.30 ಗಂಟೆ ಸುಮಾರಿಗೆ ದಾರಿ ತಪ್ಪಿ ಕಸಬಾ ಬೆಂಗ್ರೆ ಕಡೆಗೆ ತೆರಳಿದ ವೇಳೆ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವಕರನ್ನು ವಿಳಾಸ ಕೇಳುವ ಸಲುವಾಗಿ ಕಾರು ನಿಲ್ಲಿಸಿ ಮಾತನಾಡಿಸಿದ್ದರು.
ಆ ವೇಳೆ ವಿಳಾಸ ತೋರಿಸುವುದಾಗಿ ಹೇಳಿ ಕಾರಿನ ಹಿಂಭಾಗದಲ್ಲಿ ಕುಳಿತ ಆರೋಪಿಗಳು, ಸ್ವಲ್ಪ ದೂರ ಸಾಗಿದ ಬಳಿಕ ಕಾರು ನಿಲ್ಲಿಸುವಂತೆ ಹೇಳಿ ಸ್ಕ್ರೂ ಡ್ರೈವರ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಕಾರಿನ ಮುಂಭಾಗದ ಗಾಜನ್ನು ಹಾನಿಗೊಳಿಸಿ, ಅಜಯ್ ಮತ್ತು ಸ್ನೇಹಿತರಿಂದ ಟೈಟಾನ್ ವಾಚ್ (₹9,000), ಫಾಸ್ಟ್‌ಟ್ರಾಕ್ ವಾಚ್ (₹3,000), ನಗದು ₹2,000, ಕ್ಯಾಮೆರಾ ಗಿಂಬಲ್ (₹8,000), ಪವರ್ ಬ್ಯಾಂಕ್ (₹2,000) ಹಾಗೂ ರೋಲ್ಡ್ ಗೋಲ್ಡ್ ಬ್ರೇಸ್‌ಲೇಟ್ (₹500) ಸೇರಿ ಒಟ್ಟು ₹24,500 ಮೌಲ್ಯದ ವಸ್ತುಗಳನ್ನು ಕಿತ್ತುಕೊಂಡಿದ್ದಾರೆ.
ಇದಲ್ಲದೆ, ಕಾರಿನ ಗಾಜು ಹಾನಿಯಿಂದ ಸುಮಾರು ₹8,000 ನಷ್ಟ ಉಂಟಾಗಿದ್ದು, ಒಟ್ಟು ನಷ್ಟದ ಮೊತ್ತ ₹32,500 ಆಗಿದೆ. ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 49/2026 ಕಲಂ 309(4), 324(1) BNS-2023 ಹಾಗೂ 2(a) ಕೆಪಿಡಿಎಲ್‌ಪಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪಣಂಬೂರು ಠಾಣೆ ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್ ಅವರ ನೇತೃತ್ವದಲ್ಲಿ, ಪಿ.ಎಸ್.ಐ.ಗಳಾದ ಶ್ರೀಮತಿ ಶ್ರೀಕಲಾ ಕೆ.ಟಿ., ಜ್ಞಾನಶೇಖರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಏ.13ರಂದು ಮೊಹಮ್ಮದ್ ಸಿನಾನ್ (24) ಮತ್ತು ಝಹೀರ್ ನಿಸಾರ್ (22), ಇಬ್ಬರೂ ಕಸಬಾ ಬೆಂಗ್ರೆ ನಿವಾಸಿಗಳನ್ನು ವಶಕ್ಕೆ ಪಡೆದಿದ್ದರು. ಅವರಿಂದ ಗಿಂಬಲ್, ಟೈಟಾನ್ ವಾಚ್ ಹಾಗೂ ಕೃತ್ಯಕ್ಕೆ ಬಳಸಿದ ಸ್ಕ್ರೂ ಡ್ರೈವರ್ ವಶಪಡಿಸಿಕೊಳ್ಳಲಾಗಿದೆ.
ಇನ್ನೊಬ್ಬ ಆರೋಪಿ ಚಂದು ಹಾರೀಸ್ (33) ತಲೆಮರೆಸಿಕೊಂಡಿದ್ದನು. ಈತನನ್ನು ಏ.22ರಂದು ಬಂಧಿಸಿ, ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಹಾಗೂ ಕೃತ್ಯಕ್ಕೆ ಬಳಸಿದ ಟಿವಿಎಸ್ ಅಪಾಚೆ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಚಂದು ಹಾರೀಸ್ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಪಣಂಬೂರು ಠಾಣೆಯಲ್ಲಿ ರೌಡಿ ಪಟ್ಟಿಯಲ್ಲಿದ್ದಾನೆ. ಈತನ ವಿರುದ್ಧ ಹಳೆಯ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಮೂರು ವಾರೆಂಟ್‌ಗಳು ಬಾಕಿ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!