ಕರ್ನಾಟಕ ರಾಜಕಾರಣದಲ್ಲಿ (Karnataka Politics)ತೀವ್ರ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ರಾಜೀನಾಮೆ ವಿಚಾರ ಈಗ ಅತ್ಯಂತ ರೋಚಕ ತಿರುವು ಪಡೆದುಕೊಂಡಿದೆ.

ಸಿಎಂ ಹುದ್ದೆಯಿಂದ ಕೆಳಗಿಳಿಯಲು ಹೈಕಮಾಂಡ್ ಸೂಚನೆಗೆ ಸಮ್ಮತಿಸಿರುವ ಸಿದ್ದರಾಮಯ್ಯ ಅವರು, ದೆಹಲಿ ನಾಯಕರು ತಮಗೆ ನೀಡಿದ್ದ ಬಂಪರ್ ಆಫರ್‌ಗಳನ್ನು ನಯವಾಗಿಯೇ ತಿರಸ್ಕರಿಸುವ ಮೂಲಕ ಅಚ್ಚರಿಯ ನಡೆ ಇಟ್ಟಿದ್ದಾರೆ.

ಹೈಕಮಾಂಡ್‌ನ ದೊಡ್ಡ ಲೆಕ್ಕಾಚಾರಗಳಿಗೆ ಎರಡು ಪ್ರಮುಖ ವಿಚಾರಗಳಲ್ಲಿ ಬಿಗ್ ಚೆಕ್‌ಮೇಟ್ ನೀಡುವ ಮೂಲಕ ಸಿದ್ದರಾಮಯ್ಯ ತಮ್ಮ ರಾಜಕೀಯ ಗತ್ತು ಮುಂದುವರಿಸಿದ್ದಾರೆ.

“ನಾನು ರಾಜ್ಯ ಬಿಟ್ಟು ಕದಲುವುದಿಲ್ಲ”

ದೇಶದಲ್ಲೇ ಹಿಂದುಳಿದ ವರ್ಗಗಳ (OBC) ಪ್ರಭಾವಿ ನಾಯಕ ಎಂಬ ಹೆಗ್ಗಳಿಕೆ ಪಾತ್ರರಾಗಿರುವ ಸಿದ್ದರಾಮಯ್ಯ ಅವರನ್ನು ದೆಹಲಿ ಮಟ್ಟಕ್ಕೆ ಕರೆದೊಯ್ಯಲು ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿತ್ತು. ಸಿದ್ದರಾಮಯ್ಯನವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸುವ ಹಾಗೂ ಕೇಂದ್ರ ಮಟ್ಟದಲ್ಲಿ ಪಕ್ಷದ ಪ್ರಮುಖ ಜವಾಬ್ದಾರಿ ನೀಡುವ ಆಫರ್ ಅನ್ನು ಹೈಕಮಾಂಡ್ ಮುಂದಿಟ್ಟಿತ್ತು. ಆದರೆ, ಈ ಪ್ರಸ್ತಾಪವನ್ನು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. “ನನಗೆ ದೆಹಲಿ ರಾಜಕಾರಣದಲ್ಲಿ ಕಿಂಚಿತ್ತೂ ಆಸಕ್ತಿ ಇಲ್ಲ. ಅನಿವಾರ್ಯವಾದರೆ ಸಿಎಂ ಸ್ಥಾನದ ಜೊತೆಗೆ ಎಲ್ಲಾ ರೀತಿಯ ಅಧಿಕಾರಗಳನ್ನೂ ತ್ಯಾಗ ಮಾಡಲು ಸಿದ್ಧ, ಆದರೆ ರಾಜ್ಯ ರಾಜಕಾರಣ ಬಿಟ್ಟು ಕದಲುವುದಿಲ್ಲ” ಎಂದು ಖಡಾಖಂಡಿತವಾಗಿ ಹೇಳುವ ಮೂಲಕ ಹೈಕಮಾಂಡ್‌ಗೆ ಮೊದಲ ಬಿಗ್ ಶಾಕ್ ನೀಡಿದ್ದಾರೆ.

ಪುತ್ರ ಯತೀಂದ್ರಗೆ ಸಚಿವ ಸ್ಥಾನ ಬೇಡ! ಕುಟುಂಬ ರಾಜಕಾರಣದ ಆರೋಪಕ್ಕೆ ಬ್ರೇಕ್!

ಇದೇ ವೇಳೆ ಮುಖ್ಯಮಂತ್ರಿಗಳು ಮತ್ತೊಂದು ಅಚ್ಚರಿಯ ಹೆಜ್ಜೆ ಇಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಸಾಮಾನ್ಯವಾಗಿ ರಾಜಕೀಯ ನಾಯಕರು ಅಧಿಕಾರದಿಂದ ಕೆಳಗಿಳಿಯುವಾಗ ತಮ್ಮ ಮಕ್ಕಳಿಗೆ ಅಥವಾ ಕುಟುಂಬದವರಿಗೆ ಅಧಿಕಾರ ಸಿಗುವಂತೆ ಹಠ ಹಿಡಿಯುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ ಸಿದ್ದರಾಮಯ್ಯ ಅವರು ಇದಕ್ಕೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ತಮ್ಮ ಪುತ್ರ, ವಿಧಾನ ಪರಿಷತ್ ಸದಸ್ಯರಾಗಿರುವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಚಿವ ಸ್ಥಾನ ಸೇರಿದಂತೆ ಯಾವುದೇ ಅಧಿಕಾರ ಹಾಗೂ ಸ್ಥಾನಮಾನಗಳು ಬೇಡ ಎಂದು ಹಠ ಹಿಡಿದಿದ್ದಾರೆ.
ಪುತ್ರನಿಗೆ ಯಾವುದೇ ಅಧಿಕಾರ ಬೇಡ ಎಂದು ಹೇಳುವ ಮೂಲಕ, ಸಿದ್ದರಾಮಯ್ಯ ಅವರು ತಮ್ಮ ಮೇಲಿರುವ ವಂಶಪಾರಂಪರ್ಯ ರಾಜಕಾರಣ ಅಥವಾ ಕುಟುಂಬ ರಾಜಕಾರಣದ ಆರೋಪಗಳಿಗೆ ತಾವೇ ಸ್ವತಃ ಮುಕ್ತಿ ಹಾಡಿದ್ದಾರೆ. ಅಲ್ಲದೆ, ಹೈಕಮಾಂಡ್ ಮುಂದೆ ಯಾವುದೇ ರೀತಿಯ ಸ್ವಾರ್ಥವಿಲ್ಲದೆ, ನೈತಿಕವಾಗಿ ತಾವು ಮೇಲುಗೈ ಸಾಧಿಸಲು ಈ ಮಾಸ್ಟರ್ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರ ಈ ಎರಡು ಪ್ರಮುಖ ನಡೆಗಳು ಈಗ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ತೀವ್ರ ಗೊಂದಲ ಹಾಗೂ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!