ಪುತ್ತೂರು, ಜೂ.16: ರಾಜ್ಯದ ವಿದ್ಯುತ್ ವಿತರಣಾ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ಮೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಂಗಳವಾರ ಬನ್ನೂರಿನ ಮೆಸ್ಕಾಂ ಪುತ್ತೂರು ವಿಭಾಗ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್ ವಿತರಣಾ ವ್ಯವಸ್ಥೆಯ ಖಾಸಗೀಕರಣ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ಜೂ.23ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು, ರೈತರು, ಕೈಗಾರಿಕೋದ್ಯಮಿಗಳು ಹಾಗೂ ಗುತ್ತಿಗೆದಾರರು ಆಕ್ಷೇಪಣೆ ಸಲ್ಲಿಸುವ ಮೂಲಕ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಡಿಪ್ಲೋಮ ಇಂಜಿನಿಯರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರಾಮಚಂದ್ರ ಎ. ಮಾತನಾಡಿ, ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಂಡರೆ ಬಿಎಸ್‌ಎನ್‌ಎಲ್‌ಗೆ ಎದುರಾದ ಪರಿಸ್ಥಿತಿ ಮೆಸ್ಕಾಂಗೂ ಎದುರಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು. ಖಾಸಗಿ ಸಂಸ್ಥೆಗಳು ಲಾಭದಾಯಕ ನಗರ ಪ್ರದೇಶಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದ್ದು, ಗ್ರಾಮೀಣ ಪ್ರದೇಶಗಳ ಸೇವೆಗೆ ಹಿನ್ನಡೆಯಾಗಬಹುದು ಎಂದರು.
659 ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯ ಕರಿಬಸಪ್ಪ ಮಾತನಾಡಿ, ಖಾಸಗೀಕರಣದಿಂದ ಸಾರ್ವಜನಿಕ ಸೇವೆಗಳ ಉದ್ದೇಶ ಕುಂಠಿತಗೊಂಡು ಲಾಭಕೇಂದ್ರಿತ ವ್ಯವಸ್ಥೆ ಜಾರಿಗೆ ಬರಬಹುದು ಎಂದು ಹೇಳಿದರು. ಖಾಸಗೀಕರಣದ ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
659 ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಷಣ್ಮುಗಪ್ಪ ಮಾತನಾಡಿ, ಖಾಸಗೀಕರಣದಿಂದ ಗ್ರಾಹಕರು, ರೈತರು, ಗುತ್ತಿಗೆದಾರರು ಹಾಗೂ ಸಿಬ್ಬಂದಿಗಳ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಪ್ರಶಾಂತ್ ಮಾತನಾಡಿ, ಖಾಸಗೀಕರಣದಿಂದ ಸಣ್ಣ ಗುತ್ತಿಗೆದಾರರಿಗೆ ಕೆಲಸದ ಅವಕಾಶಗಳು ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಗುತ್ತಿಗೆದಾರರ ಸಂಘವು ಹೋರಾಟಕ್ಕೆ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.
ಸುಳ್ಯದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುಪ್ರೀತ್ ಕುಮಾರ್ ಮಾತನಾಡಿ, ವಿದ್ಯುತ್ ಕಾಯಿದೆ ತಿದ್ದುಪಡಿಯಿಂದ ರಾಜ್ಯ ಸರ್ಕಾರದ ನಿಯಂತ್ರಣಾಧಿಕಾರಗಳ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿದ್ದು ಆಕ್ಷೇಪಣೆ ಸಲ್ಲಿಸಬೇಕು ಎಂದರು.
ಇಂಜಿನಿಯರ್ಸ್ ಸಂಘದ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಪೈ, 659 ನೌಕರರ ಸಂಘದ ಅಧ್ಯಕ್ಷ ಶಂಕರ ಪ್ರಕಾಶ್, ಎಸ್‌ಎಲ್‌ಇಎಸ್‌ಟಿ ಅಸೋಸಿಯೇಷನ್‌ನ ಕೇಂದ್ರ ಸಮಿತಿ ಸದಸ್ಯ ಸದಾಶಿವ ಹಾಗೂ ಪುತ್ತು ಜೆ. ಅವರು ಸಹ ಖಾಸಗೀಕರಣ ವಿರೋಧಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಪುತ್ತೂರು, ಸುಳ್ಯ, ಕಡಬ ಹಾಗೂ ಸುಬ್ರಹ್ಮಣ್ಯ ವಿಭಾಗಗಳ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಗುತ್ತಿಗೆದಾರರು ಭಾಗವಹಿಸಿದ್ದರು.


ಗೃಹಜ್ಯೋತಿ ಸೇರಿದಂತೆ ರಿಯಾಯಿತಿ ಯೋಜನೆಗಳಿಗೆ ಧಕ್ಕೆ ಸಾಧ್ಯ
ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಂಡರೆ ಗೃಹಜ್ಯೋತಿ ಸೇರಿದಂತೆ ವಿವಿಧ ಉಚಿತ ಹಾಗೂ ರಿಯಾಯಿತಿ ಯೋಜನೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ರಾಮಚಂದ್ರ ಎ. ಆತಂಕ ವ್ಯಕ್ತಪಡಿಸಿದರು. ಸಾರ್ವಜನಿಕರು, ರೈತರು, ಕೈಗಾರಿಕೋದ್ಯಮಿಗಳು ಹಾಗೂ ಗುತ್ತಿಗೆದಾರರು ಆಕ್ಷೇಪಣೆ ಸಲ್ಲಿಸುವ ಮೂಲಕ ಖಾಸಗೀಕರಣ ಪ್ರಕ್ರಿಯೆಯನ್ನು ತಡೆಯಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!