ಮಡಿಕೇರಿ: ಕರ್ತವ್ಯನಿರತ ಸಂಚಾರಿ ಪೊಲೀಸ್ ಸಿಬ್ಬಂದಿಯ ಸೂಚನೆಯನ್ನು ನಿರ್ಲಕ್ಷಿಸಿ ಕಾರು ಚಲಾಯಿಸುವ ಮೂಲಕ ಗಾಯಗೊಳಿಸಿ ಪರಾರಿಯಾದ ಆರೋಪದಡಿ ಕೊಡಗು ಪೊಲೀಸರು ಬಂಟ್ವಾಳದ ಚಾಲಕನನ್ನು ಶುಕ್ರವಾರ (ಅ.25) ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮುನ್ನೂರು ಗ್ರಾಮದ ನಂದವಾರಕೋಟೆ ನಿವಾಸಿ ನಝೀರ್ (27) ಬಂಧಿತ ಆರೋಪಿ.

ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಅ.20 ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿ ಎರಡು ವಾಹನಗಳ ನಡುವೆ ಡಿಕ್ಕಿಯಾಗಿ ವಾಹನದಟ್ಟಣೆ ಹೆಚ್ಚಾಗಿತ್ತು. ಈ ಸಂದರ್ಭ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಸಂಜು.ಎ.ಜಿ (27) ಅವರು ಡಿಕ್ಕಿಪಡಿಸಿದ ನಝೀರ್ ನ ಕಾರನ್ನು ಪಕ್ಕಕ್ಕೆ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಇದನ್ನು ನಿರ್ಲಕ್ಷಿಸಿದ ನಝೀರ್ ಕಾರನ್ನು ಚಲಾಯಿಸಿ ಪರಾರಿಯಾಗಿದ್ದಾನೆ. ಈ ಸಂದರ್ಭ ಸಂಜು ಅವರ ಬಲಗಾಲಿಗೆ ಗಾಯವಾಗಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಮಹೇಶ್ ಕುಮಾರ್, ಮಡಿಕೇರಿ ನಗರ ಸಿಪಿಐ ರಾಜು.ಪಿ.ಕೆ, ಪಿಎಸ್‌ಐ ಲೋಕೇಶ್ ಹಾಗೂ ಸಿಬ್ಬಂದಿಗಳ ತನಿಖಾ ತಂಡ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!