
ಪುತ್ತೂರು: ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರ ಕುರಿತು ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಬರಹಕ್ಕೆ ಸಂಬಂಧಿಸಿ ದೂರು ಸ್ವೀಕರಿಸಲು ಪುತ್ತೂರು ಪೊಲೀಸ್ ಠಾಣಾ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್ ಠಾಣಾ ಮುಂಭಾಗ ನಗರಸಭೆಯ ಬಿಜೆಪಿ ಸದಸ್ಯರು, ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಡಿ. 1 ರಂದು ಪ್ರತಿಭಟನೆ ನಡೆಯಿತು.
ಆರೋಪಿ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಾಗುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಬಿಜೆಪಿಯವರು ಪಟ್ಟು ಹಿಡಿದಿದ್ದು ಈ ವೇಳೆ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಕಿಡಿಗೇಡಿಯ ವಿರುದ್ಧ ಕ್ರಮಕ್ಕೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರ ಪೊಲೀಸ್ ಠಾಣಾ ಅಧಿಕಾರಿ ದೂರು ದಾಖಲಿಸುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.






