ನಗರದ ಪಡೀಲ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾಮಗಾರಿಯನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ವೀಕ್ಷಿಸಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾಧಿಕಾರಿ ಕಚೇರಿಯ ನೂತನ ಸಂಕೀರ್ಣದ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಿ, ಹಳೆಯ ಕಚೇರಿಯಿಂದ ವಿವಿಧ ಕಚೇರಿಗಳನ್ನು ಸ್ಥಳಾಂತರಗೊಳಿಸಲಾಗುವುದು.
ಮಾರ್ಚ್ ಅಥವಾ ಬಜೆಟ್ ಅಧಿವೇಶನದ ಬಳಿಕ ಜಿಲ್ಲಾಧಿಕಾರಿ ಸಂಕೀರ್ಣದ ಉದ್ಘಾಟನೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು ಎಂದು ತಿಳಿಸಿದರು.
ಸಂಕೀರ್ಣದಲ್ಲಿ ಇಲಾಖೆಗಳಿಗೆ ನಿಗದಿಪಡಿಸಿರುವ ಕಚೇರಿಗಳ ಒಳಾಂಗಣದ ಕೆಲಸಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಉಳಿಕೆ ಕೊಠಡಿಗಳನ್ನು ಕೇಂದ್ರದ ಇಲಾಖೆಗಳು, ಕಚೇರಿಗಳಿಗೆ ಬಾಡಿಗೆಗೆ ನೀಡಲಾಗುತ್ತದೆ. ಇದರಿಂದ ಆದಾಯ ಸೃಷ್ಟಿಯಾಗುತ್ತದೆ ಎಂದು ಹೇಳಿದರು.
ಸಂಕೀರ್ಣ ಪೂರ್ಣಗೊಳಿಸಲು ಅನುದಾನದ ಕೊರತೆಯಾಗಿಲ್ಲ. ಆಡಿಟೋರಿಯಂ ಕೆಲಸ ಬಾಕಿ ಉಳಿದಿದ್ದು, ಕಂದಾಯ ಸಚಿವರು ಇತರೆ ಇಲಾಖೆಯಿಂದ ಅನುದಾನ ದೊರಕಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿ ಹಳೆಯ ಕಟ್ಟಡವನ್ನು ಪುನಃಶ್ಚೇತನಗೊಳಿಸಿ ಪಾರಂಪರಿಕ ಕೇಂದ್ರವಾಗಿ ರೂಪಿಸಲು ಮಾಸ್ಟರ್ ಪ್ಲ್ಯಾನ್ ತಯಾರಿಸುತ್ತಿದ್ದೇವೆ. ಜನರ ಬಳಕೆಗೆ ಅನುಕೂಲವಾಗುವಂತೆ ಅಲ್ಲಿ ಸಾಂಸ್ಕೃತಿಕ ಕೇಂದ್ರ, ವಸ್ತು ಸಂಗ್ರಹಾಲಯ ತೆರೆಯಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್ ನಾಯಕ್, ಮುಡಾ ಕಮಿಷನರ್ ನೂರ್ ಜಹಾನ್ ಖಾನಂ, ನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಜೊತೆಗಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಂಗಳೂರಿನ ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಾಮಗಾರಿಯನ್ನು ಪರಿಶೀಲಿಸಿದರು














