ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು, ಅಭಿವೃದ್ಧಿ ಕುಂಠಿತವಾಗಬಹುದು ಎಂಬ ನಿರಾಶಾವಾದಿ ಭವಿಷ್ಯ ಸುಳ್ಳಾಗಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ತಿಳಿಸಿದರು.
76ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಭಾನುವಾರ ಮಾತನಾಡಿದರು.
ಸಂವಿಧಾನದ ಮಹತ್ವದ ಆಶಯವಾದ ಸಾಮಾಜಿಕ, ಆರ್ಥಿಕ ನ್ಯಾಯ ನೆಲೆಗೊಳಿಸಲು ಶಕ್ತಿ ಮೀರಿ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಐದು ಗ್ಯಾರಂಟಿ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿ ಜಾರಿಗೊಂಡು ದೇಶದ ಗಮನ ಸೆಳೆದಿವೆ’ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಗೆ ಮಾಸಿಕ ₹2 ಸಾವಿರದಂತೆ 2023ರ ಆಗಸ್ಟ್‌ನಿಂದ ಇಲ್ಲಿಯವರೆಗೆ ಒಟ್ಟು ₹35,180.20 ಕೋಟಿ ಆರ್ಥಿಕ ನೆರವು ನೀಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 1.62 ಕೋಟಿ ಗ್ರಾಹಕರು ಪ್ರಯೋಜನ ಪಡೆಯುತ್ತಿದ್ದಾರೆ. ವಿದ್ಯುತ್ ಸರಬರಾಜು ಕಂಪನಿಗಳಿಗೆ ₹13,409 ಕೋಟಿ ಸಹಾಯಧನದ ಮೊತ್ತ ನೀಡಲಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ₹9,051 ಕೋಟಿ ವಿನಿಯೋಗಿಸಲಾಗಿದೆ. ಯುವನಿಧಿ ಯೋಜನೆಯಡಿ 2,18,214 ಜನ ನೋಂದಣಿ ಮಾಡಿಕೊಂಡಿದ್ದು, ಈವರೆಗೆ 1,24,176 ಮಂದಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಜನರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಯಡಿ 4.48 ಕೋಟಿ ಫಲಾನುಭವಿಗಳಿಗೆ ₹9,775 ಕೋಟಿ ವರ್ಗಾವಣೆ ಮಾಡಲಾಗಿದೆ ಎಂದು ವಿವರ ನೀಡಿದರು.
ರಾಜ್ಯ ಸರ್ಕಾರವು ಹಣಕಾಸು ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದು, ವರಮಾನ ಸಂಗ್ರಹದಲ್ಲಿ ಶೇಕಡ 13ರಷ್ಟು ಪ್ರಗತಿ ಸಾಧಿಸಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ದೇಶದಲ್ಲಿಯೇ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಬಲಪಡಿಸಲು ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದೆ. ರಾಜ್ಯದ ಸಮತೋಲಿತ, ಸಮಗ್ರ ಅಭಿವೃದ್ಧಿಗಾಗಿ ನಂಜುಂಡಪ್ಪ ವರದಿ ಅನುಷ್ಠಾನ ಮಾಡಲಾಗಿದೆ. ಉದ್ದೇಶಿತ ಗುರಿಗಳ ಸಾಧನೆ ಮಾಡಲಾಗಿದೆಯೇ ಎಂಬುದನ್ನು ಅರಿಯಲು ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದರು.
ನಮ್ಮ ಮೆಟ್ರೊ 2ಎ ಹಂತದ ಕಾಮಗಾರಿಗಳು ನಡೆಯುತ್ತಿವೆ. ಹಂತ 3ರಲ್ಲಿ 76 ಕಿ.ಮೀ.ಉದ್ದದ ಕಾಮಗಾರಿಯನ್ನು ₹15,611 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ನೌಕರರಿಗೆ ₹1 ಕೋಟಿ ಮೌಲ್ಯದ ಅಪಘಾತ ವಿಮಾ ಯೋಜನೆ ಸೌಲಭ್ಯ ಒದಗಿಸಲಾಗಿದೆ. ರೈತರ ಆದಾಯ ಹೆಚ್ಚಿಸಲು ಇಂಗಾಲ ಹೀರಿಕೊಳ್ಳುವ ತೋಟಗಾರಿಕೆ ಬೆಳೆಗಳನ್ನು ಗುರುತಿಸುವ ‘ಕಾರ್ಬನ್ ಕ್ರೆಡಿಟ್ ಫ್ರೇಮ್‌ವರ್ಕ್’ (ಸಿಸಿಎಫ್) ಎಂಬ ಹೊಸ ಕಾರ್ಯಕ್ರಮ ಪರಿಚಯಿಸಲಾಗಿದೆ. 9 ಲಕ್ಷ ಹಾಲು ಉತ್ಪಾದಕರಿಗೆ ₹1,124 ಕೋಟಿ ಪ್ರೋತ್ಸಾಹ ಧನ ನೀಡಲಾಗಿದೆ ಎಂದು ಹೇಳಿದರು.














