
ಕುಂಭಮೇಳಕ್ಕೆ ಭೇಟಿ ನೀಡಿದ್ದು, ಈಗ ಶಿವರಾತ್ರಿ ಅಂಗವಾಗಿ ಇಶಾ ಫೌಂಡೇಶನ್ ಗೆ ಭೇಟಿ ನೀಡುತ್ತಿರುವುದರ ಬಗ್ಗೆ ತಮ್ಮ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿಯೇ ಸಾಯುತ್ತೆನೆ ಎಂದು ಡಿಕೆ ಶಿವಕುಮಾರ್ ಟೀಕಾಕಾರರಿಗೆ ಖಡಕ್ ಟಾಂಗ್ ಕೊಟ್ಟಿದ್ದಾರೆ.
ಸದಾಶಿವ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನಾನು ಕುಂಭಮೇಳದಲ್ಲಿ ಭಾಗಿಯಾಗಿದ್ದು ನನ್ನ ನಂಬಿಕೆ, ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ. ಆದರೆ ಎಲ್ಲ ಧರ್ಮದ ಬಗ್ಗೆ ಗೌರವ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಕುಂಭಮೇಳದ ಆಯೋಜನೆ ಬಗ್ಗೆಯೂ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಡಿಕೆ ಶಿವಕುಮಾರ್, ಕುಂಭ ಮೇಳದಲ್ಲಿ ಉತ್ತಮ ಅನುಭವ ಆಗಿದೆ. ತುಂಬಾ ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕುಂಭ ಮೇಳ ವಿಷಯವನ್ನು ರಾಜಕೀಯಗೊಳಿಸುವುದನ್ನು ವಿರೋಧಿಸುವ ಮೂಲಕ ತಮ್ಮದೇ ಪಕ್ಷದವರಿಗೆ ಟಾಂಗ್ ಕೊಟ್ಟಿದ್ದಾರೆ.
ಕುಂಭಮೇಳದಲ್ಲಿ ಭಾಗಿಯಾಗಿದ್ದಕ್ಕಾಗಿ ನಾನು ಬಿಜೆಪಿಗೆ ಹತ್ತಿರ ಆಗುತ್ತಿದ್ದೇನೆ ಎಂದು ಕೆಲವು ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ನಾನು ಹುಟ್ಟು ಕಾಂಗ್ರೆಸ್ಸಿಗ. ಕುಂಭ ಮೇಳಕ್ಕೆ ನಾನು ಭೇಟಿ ಕೊಟ್ಟಿರುವುದು ನನ್ನ ನಂಬಿಕೆ ಇಂತಹ ಊಹಾಪೋಹಗಳು ನನ್ನ ಹತ್ತಿರವೂ ಸುಳಿಯುವುದು ಬೇಡ, ಬಿಜೆಪಿ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ಹೇಳಿದ್ದಾರೆ.
