
ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ ಕೆಲವೇ ಗಂಟೆಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಆದರೆ ನಿನ್ನೆ ರಾತ್ರಿ ಮತ್ತೆ ಪಾಕಿಸ್ತಾನದಿಂದ ದಾಳಿ ಪ್ರಾರಂಭವಾಗಿದೆ. ಅದೇ ಕಾರಣಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಹೆಸರು ಇದ್ದಕ್ಕಿದ್ದಂತೆ ಭಾರೀ ಟ್ರೆಂಡಿಂಗ್ ಆಗಿದೆ.
ಅದೇ ಇಂದಿರಾ ಗಾಂಧಿ.
ಕೈ ನಾಯಕರು ಒಂದು ಹೆಜ್ಜೆ ಮುಂದೆ ಹೋಗಿ ದೆಹಲಿಯ ಕಾಂಗ್ರೆಸ್ ಕಚೇರಿಯ ಮುಂದೆ ದೊಡ್ಡ ದೊಡ್ಡ ಪೋಸ್ಟರ್ ಹಾಕಿದ್ದಾರೆ. ಇಂದಿರಾ ಗಾಂಧಿ ಇದ್ದಿದ್ದರೆ ಇಂಥಾ ಸ್ಥಿತಿ ಬರುತ್ತಿರಲಿಲ್ಲ ಎಂದು ಬರೆಸಿದ್ದಾರೆ.
ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ 1971ರ ಯುದ್ಧ, ನಿರಾಶ್ರಿತರ ಬಿಕ್ಕಟ್ಟು ಆಗಿರಲಿ, ಅಮೆರಿಕದ ಒತ್ತಡವಾಗಲಿ ಪ್ರತಿಯೊಂದರಲ್ಲಿ ಹೆಜ್ಜೆ ಹಿಂದಿಟ್ಟಿರಲಿಲ್ಲ. ಇಂದಿರಾ ಗಾಂಧಿಯವರ ದಿಟ್ಟ ನಿರ್ಧಾರಗಳೇ ಅವರಿಗೆ ಉಕ್ಕಿನ ಮಹಿಳೆ ಎಂದ ಪಟ್ಟ ತಂದು ಕೊಟ್ಟಿದ್ದವು
1971ರಲ್ಲಿ, ಪಾಕಿಸ್ತಾನದ ಪೂರ್ವ ಪ್ರದೇಶ (ಈಗ ಬಾಂಗ್ಲಾದೇಶ) ಬಂಗಾಳಿ ನಾಗರಿಕರ ಮೇಲೆ ಪಾಕಿಸ್ತಾನಿ ಸೇನೆಯು ಭೀಕರ ದೌರ್ಜನ್ಯ ನಡೆಸುತ್ತಿತ್ತು. ಲಕ್ಷಾಂತರ ನಿರಾಶ್ರಿತರು ಸುರಕ್ಷಿತ ನೆಲೆ ಅರಸುತ್ತಾ ಭಾರತಕ್ಕೆ ಬಂದಿದ್ದರು. ಅದು ದೇಶದ ಆಂತರಿಕ ಭದ್ರತೆ ದೊಡ್ಡ ಮಟ್ಟದ ಒತ್ತಡವನ್ನುಂಟು ಮಾಡಿತ್ತು. ಆದ್ದರಿಂದ ಡಿಸೆಂಬರ್ 3, 1971 ರಂದು ಪಾಕಿಸ್ತಾನ ಭಾರತದ ಮೇಲೆ ವಾಯುದಾಳಿ ನಡೆಸಿತು.
ಭಾರತೀಯ ಸೇನೆ ಕೇವಲ 13 ದಿನಗಳಲ್ಲಿ ಐತಿಹಾಸಿಕ ಗೆಲುವು ಸಾಧಿಸಿತು. 93,000 ಪಾಕಿಸ್ತಾನಿ ಸೈನಿಕರು ಶರಣಾದರು. ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ವರೆಗೆ ನುಗ್ಗಿತ್ತು. ಖುದ್ದು ಪ್ರಧಾನಿ ಇಂದಿರಾ ಯುದ್ಧ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದರು. ಆ ಯುದ್ಧದ ಪರಿಣಾಮವಾಗಿ, ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ಮೋದಿ ಕೂಡಾ ಅಂಥದ್ದೇ ನಿರ್ಧಾರಕ್ಕೆ ಬರಬೇಕು ಎಂದು ಕಾಂಗ್ರೆಸ್ ಬಯಸುತ್ತಿದೆ.






