ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯ ಬಳಿಕ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಇದ್ದಕ್ಕಿದ್ದಂತೆ ಸೋಶಿಯಲ್‌ ಮೀಡಿಯಾಗಳಲ್ಲಿ ಟ್ರೋಲ್‌ಗಳಿಗೆ ಗುರಿಯಾಗಿದ್ದರು. ಇಷ್ಟು ಮಾತ್ರವಲ್ಲದೆ ಟ್ರೋಲ್‌ಗಳು ಅವರ ಕುಟುಂಬವನ್ನು, ಅವರ ಮಗಳನ್ನು ಸಹ ಗುರಿಯಾಗಿಸಿಕೊಂಡಿದ್ದು, ಅವರ ವಿರುದ್ಧ ನಿಂದನೀಯ ಭಾಷೆಯನ್ನು ಕೂಡ ಬಳಸಲಾಯಿತು.

ಈ ಡಿಜಿಟಲ್ ದಾಳಿಯಿಂದಾಗಿ, ವಿಕ್ರಮ್ ಮಿಶ್ರಿ ತಮ್ಮ ಎಕ್ಸ್ ಖಾತೆಯನ್ನು ಖಾಸಗಿಯಾಗಿ ಮಾಡಬೇಕಾಯಿತು.

ಮಿಶ್ರಿ ಅವರ ಟ್ರೋಲಿಂಗ್ ಎಷ್ಟರ ಮಟ್ಟಿಗೆ ಹೆಚ್ಚಾಗಿತ್ತೆಂದರೆ, ಕೆಲವು ಸೋಶಿಯಲ್‌ ಮೀಡಿಯಾ ಬಳಕೆದಾರರು ಮಿಶ್ರಿ ಅವರ ಮಗಳನ್ನು ಟೀಕಿಸಿದರು ಮತ್ತು ಅವರ ಪೌರತ್ವದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದರು. ಮಿಶ್ರಿಯವರ ಮಗಳು ಡಿಡನ್ ಮಿಶ್ರಿ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆ ಕಾನೂನಿನಲ್ಲಿ ಪರಿಣಿತರು. ರೋಹಿಂಗ್ಯಾ ನಿರಾಶ್ರಿತರಿಗೆ ಕಾನೂನು ನೆರವು ನೀಡುತ್ತಿರುವುದಕ್ಕಾಗಿ ಟ್ರೋಲ್‌ಗಳು ಅವರನ್ನು ಸುಳ್ಳು ಆರೋಪಗಳಲ್ಲಿ ಎಳೆದು ಟೀಕಿಸಲು ಪ್ರಾರಂಭಿಸಿದರು.

ಈ ಬೆನ್ನಲ್ಲೇ AIMIM ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಅವರು ಮಿಶ್ರಿ ಬೆನ್ನಿಗೆ ನಿಂತಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಓವೈಸಿ, ವಿಕ್ರಮ್ ಮಿಶ್ರಿ ಒಬ್ಬ ಉದಾತ್ತ, ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮಿ ರಾಜತಾಂತ್ರಿಕರಾಗಿದ್ದು, ಅವರು ನಮ್ಮ ಪ್ರೀತಿಯ ದೇಶಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ನಾಗರಿಕ ಸೇವಕರು ಕಾರ್ಯಾಂಗದ ಅಡಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಯಾವುದೇ ರಾಜಕೀಯ ನಿರ್ಧಾರಕ್ಕೆ ಅವರನ್ನು ದೂಷಿಸಬಾರದು ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಬರೆದುಕೊಂಡಿದ್ದಾರೆ.

ಓವೈಸಿಯಲ್ಲದೆ, ಕಾಂಗ್ರೆಸ್ ನಾಯಕ ಸಲ್ಮಾನ್ ಅನೀಸ್ ಸೋಜ್ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಸೇರಿದಂತೆ ಅನೇಕ ನಾಯಕರು ಮತ್ತು ಹಿರಿಯ ರಾಜತಾಂತ್ರಿಕರು ಸಹ ಮಿಶ್ರಿಯನ್ನು ಸಮರ್ಥಿಸಿಕೊಂಡರು.

Leave a Reply

Your email address will not be published. Required fields are marked *

Join WhatsApp Group
error: Content is protected !!