ಇಲ್ಲಿನ ಅಹ್ಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಭೀಕರ ದುರಂತ ಸಂಭವಿಸಿದ ಘಟನಾ ಸ್ಥಳವಾದ ವಿಮಾನ ಡಿಕ್ಕಿ ಹೊಡೆದಿದ್ದ ವಿದ್ಯಾರ್ಥಿಗಳ ಹಾಸ್ಟೆಲ್ ಮತ್ತು ಗಾಯಾಳುಗಳು ದಾಖಲಾಗಿರುವ ಸಿವಿಲ್ ಆಸ್ಪತ್ರೆಗೆ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡಿದ್ದಾರೆ.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ ಕೆ ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ, ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್, ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ಘಟಕದ ಅಧ್ಯಕ್ಷ ಪವನ್ ಖೇರಾ ಮತ್ತಿತರರು ಮಲ್ಲಿಕಾರ್ಜುನ ಅವರಿಗೆ ಸಾಥ್ ನೀಡಿದ್ದಾರೆ.
ಈ ಬಗ್ಗೆ ಪೋಸ್ಟ್ ಮಾಡಿಯುವ ಡಿಸಿಎಂ ಡಿಕೆ ಶಿವಕುಮಾರ್, ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ, ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಬಳಿ ಸಂಭವಿಸಿದ ದುರಂತದ ಸ್ಥಳ ಮತ್ತು ಆ ಬಳಿಕ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಭೇಟಿ ಮಾಡಿದೆವು ಎಂದಿದ್ದಾರೆ.
ಈ ವಿನಾಶಕಾರಿ ಘಟನೆಯಿಂದ ಬಾಧಿತರಾದ ಪ್ರತಿಯೊಬ್ಬರೊಂದಿಗೆ ನಮ್ಮ ಪ್ರಾರ್ಥನೆಯಿದೆ. ಹೀಗಾಗಿ ನಮ್ಮ ಹೃತ್ಪೂರ್ವಕ ಬೆಂಬಲ ನೀಡಲು ನಾವು ಬದುಕುಳಿದವರು ಮತ್ತು ಅವರ ಕುಟುಂಬಗಳನ್ನು ಭೇಟಿ ಮಾಡಿದ್ದೇವೆ. ಇಂತಹ ನಿರ್ಣಾಯಕ ಸಮಯದಲ್ಲಿ ವೈದ್ಯಕೀಯ ತಂಡಗಳ ಶ್ರಮವನ್ನು ನಾವು ಶ್ಲಾಘಿಸುತ್ತೇವೆ ಎಂದಿದ್ದಾರೆ.














