ಹಣಕಾಸು ಆಯೋಗದ 16ನೇ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಗ್ಗೆ ದೆಹಲಿಯ ಕರ್ನಾಟಕ ಭವನದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಜೊತೆ ಉಪಾಹಾರ ಸೇವಿಸಿದರು. ವಾರದಲ್ಲಿ ಎರಡು ಬಾರಿ ಹರಿಪ್ರಸಾದ್‌ರನ್ನು ಭೇಟಿ ಮಾಡಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಈ ವೇಳೆ, ರಾಜ್ಯದ ಸದ್ಯದ ರಾಜಕೀಯ ವಿದ್ಯಮಾನ ಸೇರಿ ಹಲವು ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕೂಡ ಈ ವೇಳೆ ಹಾಜರಿದ್ದರು.
ವಾರದ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿ.ಕೆ.ಹರಿಪ್ರಸಾದ್ ಅವರ ಬೆಂಗಳೂರು ನಿವಾಸಕ್ಕೆ ಖುದ್ದು ತೆರಳಿ, ಅವರೊಂದಿಗೆ ಚರ್ಚೆ ನಡೆಸಿದ್ದರು. ಎಐಸಿಸಿ ಅಂಗಳದಲ್ಲಿ ಒಂದು ಕಾಲದಲ್ಲಿ ಪ್ರಭಾವಿಯಾಗಿದ್ದ ಬಿ.ಕೆ.ಹರಿಪ್ರಸಾದ್ ಅವರ ಜೊತೆಗಿನ ಸಿದ್ದರಾಮಯ್ಯ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಮೂಲಕ ಉಭಯ ನಾಯಕರ ನಡುವೆ ಸಂಬಂಧ ಸುಧಾರಣೆಯ ಅಧ್ಯಾಯ ಆರಂಭವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿ ಬಂದಿದ್ದವು.














