
ಉಪ್ಪಿನಂಗಡಿ, ಆ.2: ಇಲ್ಲಿನ 34ನೇ ನೆಕ್ಕಿಲಾಡಿ ಗ್ರಾಮದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿದ್ದ ಹಾವೇರಿ ಮೂಲದ ಯುವತಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಸಂಕ್ರಿಕೊಪ್ಪ ಮನೆ ನಿವಾಸಿ ಭೀಮಪ್ಪ ಎಂಬವರ ಪತ್ನಿ ರೇಷ್ಮಾ ಮಲಲಿ ಭಜಂತ್ರಿ (26) ನಾಪತ್ತೆಯಾಗಿರುವ ಯುವತಿ. ಈ ದಂಪತಿ ಕಳೆದ ಕೆಲ ಕಾಲದಿಂದ ಉಪ್ಪಿನಂಗಡಿಯ 34ನೇ ನೆಕ್ಕಿಲಾಡಿ ಎಂಬಲ್ಲಿ ಬಾಡಿಗೆಗೆ ವಾಸವಾಗಿದ್ದರು.
ಜುಲೈ 26ರಂದು ನಾಗರ ಪಂಚಮಿ ಹಬ್ಬಕ್ಕಾಗಿ ಭೀಮಪ್ಪ ಹಾವೇರಿಗೆ ತೆರಳಿದ್ದರಾದರೂ, ಜುಲೈ 30ರಂದು ಹಿಂತಿರುಗಿದಾಗ ಪತ್ನಿ ಮನೆಗೆ ಕಾಣೆಯಾಗಿರುವುದು ಸ್ಪಷ್ಟವಾಗಿದೆ. ಹಲವು ಕಡೆ ಹುಡುಕಾಡಿದರೂ ಪತ್ನಿಯ ಗುರುತು ಪತ್ತೆಯಾಗಿಲ್ಲವೆಂದು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






