
ಪುತ್ತೂರು: ಭಾರತದ ಮೊದಲ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ, ಉಳ್ಳಾಲದ ವೀರ ರಾಣಿ ಅಬ್ಬಕ್ಕ ಅವರ 500ನೇ ಜನ್ಮ ದಿನಾಚರಣೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕನಾಟಕ ದಕ್ಷಿಣ ಪ್ರಾಂತದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ಬೃಹತ್ ರಥಯಾತ್ರೆ ಆಯೋಜಿಸಲಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಸಂಚಾಲಕ ಸಮನ್ವಿತ್
ಹೇಳಿದರು.
ಸೆಪ್ಟೆಂಬರ್ 6ರಿಂದ ಆರಂಭಗೊಂಡ ಈ ರಥಯಾತ್ರೆ, ಸೆಪ್ಟೆಂಬರ್ 17ರವರೆಗೆ ದಕ್ಷಿಣ ಕನ್ನಡದಾದ್ಯಂತ ಸಂಚರಿಸಲಿದೆ. ಇದರ ಅಂಗವಾಗಿ ಸೆಪ್ಟೆಂಬರ್ 15, ಸೋಮವಾರದಂದು ರಥವು ಉಪ್ಪಿನಂಗಡಿಯ ಮೂಲಕ ಪುತ್ತೂರಿಗೆ ಆಗಮಿಸಲಿದ್ದು, ಪಡೀಲಿನಲ್ಲಿ ಅದನ್ನು ಸ್ವಾಗತಿಸಲಾಗುವುದು. ನಂತರ ಬೊಳುವಾರು ಮೂಲಕ ರಥವು ನೆಹರು ನಗರಕ್ಕೆ ಸಾಗಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಈ ಸಭಾಕಾರ್ಯಕ್ರಮದಲ್ಲಿ ಹಿರಿಯರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಎಬಿವಿಪಿ ಮಂಗಳೂರು ವಿಭಾಗದ ಪ್ರಮುಖರಾದ ಶ್ರೀ ಕೇಶವ ಬಂಗೇರ ಅವರು ಮುಖ್ಯ ವಕ್ತಾರರಾಗಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಶ್ರೀ ಕಿರಣ್ ಚಂದ್ರ ಪುಷ್ಪಗಿರಿ ಉಪಸ್ಥಿತಲಿರುವರು
ಅಭಾವಿಪಿ ಪುತ್ತೂರು ಜಿಲ್ಲಾ ಸಂಚಾಲಕರಾದ ನಮನ್ವಿತ್ ಕೆ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ. ಇದೇ ವೇಳೆ ಎಬಿವಿಪಿ ಪದಾಧಿಕಾರಿಗಳು, ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಚಾಲಕರು, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.





