
ವಿ ಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ದಸರಾ ಉದ್ಘಾಟನೆಗೆ ವಿರೋಧ ಎದುರಿಸಿದ್ದ ಬಾನು ಮುಷ್ತಾಕ್ ಕುರಿತು ಮಾತನಾಡಿದ್ದಾರೆ. ಅವರು ಹಿಂದೂ ಸಂಸ್ಕೃತಿಗೆ ಗೌರವ ನೀಡುವ ರೀತಿಯಲ್ಲಿ ನಡೆದುಕೊಂಡಿದ್ದು, ಅವರನ್ನು ವಿರೋಧಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಬಾನು ಮುಷ್ತಾಕ್ ಅವರ ಕಾರ್ಯವೈಖರಿ ಹಿಂದೂ ಸಮಾಜಕ್ಕೆ ಸಂತೋಷ ತಂದಿದೆ ಎಂದು ಅವರು ತಿಳಿಸಿದ್ದಾರೆ.
ನಾರಾಯಣಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ವಿರೋಧಿಸಲಾಗಿತ್ತು. ಆದರೆ, ಈಗ ಅವರ ನಡೆಗಳು ಖುಷಿ ತಂದಿವೆ. ಅವರು ಒಬ್ಬ ಹಿಂದೂ ಹೆಣ್ಣುಮಗಳಂತೆ ದೇವಸ್ಥಾನಕ್ಕೆ ಬಂದು ಕೈಮುಗಿದಿದ್ದಾರೆ, ಆರತಿ ಬೆಳಗಿ ದೇವರ ಮುಂದೆ ನಿಂತಿದ್ದಾರೆ’ ಎಂದು ಹೇಳಿದ್ದಾರೆ. ಚಾಮುಂಡಿ ಆಶೀರ್ವಾದದಿಂದ ಉದ್ಘಾಟನೆ ಮಾಡಿದ್ದೇನೆ ಎಂದು ಬಾನು ಮುಷ್ತಾಕ್ ಹೇಳಿರುವುದು ಅವರ ಬಗ್ಗೆ ಗೌರವ ಹೆಚ್ಚಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ಮಾತುಗಳನ್ನು ಮೊದಲೇ ಹೇಳಿದ್ದಿದ್ದರೆ ಯಾವುದೇ ವಿರೋಧವಿರುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಆದರೆ, ಬಾನು ಮುಷ್ತಾಕ್ ಅವರು ಹಿಂದೂಗಳ ಭಾವನೆಗಳಿಗೆ ಗೌರವ ನೀಡಿ ನಡೆದುಕೊಂಡಿದ್ದಾರೆ. ಅವರ ಈ ನಡೆಗಳಿಂದ ಅವರ ಬಗ್ಗೆ ಅಭಿಮಾನ ಹೆಚ್ಚಾಗಿದೆ ಎಂದು ನಾರಾಯಣಸ್ವಾಮಿ ಹೇಳಿದರು.






