ಪುತ್ತೂರು: ಸಂಟ್ಯಾರ್–ಬೆಟ್ಟಂಪಾಡಿ ಲೋಕೋಪಯೋಗಿ ರಸ್ತೆಯ ಹದಗೆಟ್ಟ ಸ್ಥಿತಿಯನ್ನು ದೂರುತ್ತಾ ಹಾಗೂ ಚೆಲ್ಯಡ್ಕ ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಅಳ್ವರು ಅವರು ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಿದರು.

ಕಚೇರಿಯಲ್ಲಿ ಶಾಸಕರನ್ನು ಭೇಟಿಯಾದ ಅಳ್ವರು, ಕಳೆದ ಹಲವು ವರ್ಷಗಳಿಂದ ಸಂಟ್ಯಾರ್–ಬೆಟ್ಟಂಪಾಡಿ ರಸ್ತೆ ನಿರ್ಲಕ್ಷ್ಯಕ್ಕೊಳಗಾಗಿದ್ದು, ಸಾರ್ವಜನಿಕರ ಮನವಿಯ ಮೇರೆಗೆ ಶಾಸಕರು ₹1 ಕೋಟಿ ಅನುದಾನ ಬಿಡುಗಡೆ ಮಾಡಿ ಗುದ್ದಲಿಪೂಜೆ ನಡೆಸಿದ್ದರು ಎಂದು ತಿಳಿಸಿದರು. ಮಳೆಯ ಕಾರಣಕ್ಕೆ ಕಾಮಗಾರಿ ವಿಳಂಬಗೊಂಡಿರುವುದರಿಂದ, ಈಗ ಮಳೆ ಕಡಿಮೆಯಾಗಿರುವ ಸಂದರ್ಭದಲ್ಲಿ ಇಲಾಖೆ ತಕ್ಷಣ ಕಾಮಗಾರಿ ಪ್ರಾರಂಭಿಸಬೇಕೆಂದು ಮನವಿ ಮಾಡಿದರು.

ಇದೇ ವೇಳೆ, 40 ವರ್ಷಗಳಿಂದ ಮುಳುಗುಸೇತುವೆ ಎಂದೇ ಕುಖ್ಯಾತಿ ಪಡೆದಿದ್ದ ಚೆಲ್ಯಡ್ಕ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ಸುಮಾರು ₹3 ಕೋಟಿ ಅನುದಾನದೊಂದಿಗೆ ನಿರ್ಮಾಣವಾಗುತ್ತಿರುವ ಸೇತುವೆಯನ್ನು ಶೀಘ್ರ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ತೆರೆದು ಕೊಡಬೇಕು ಎಂದು ಅಳ್ವರು ಶಾಸಕರಿಗೆ ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ರೈ ಅವರು, “ರಸ್ತೆ ಕಾಮಗಾರಿಗೆ ₹1 ಕೋಟಿ ಅನುದಾನ ಈಗಾಗಲೇ ಮಂಜೂರಾಗಿದೆ. ಮಳೆಯ ಕಾರಣಕ್ಕೆ ವಿಳಂಬವಾಗಿದ್ದ ಕಾಮಗಾರಿ ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಚೆಲ್ಯಡ್ಕ ಸೇತುವೆಯ ಉಳಿದ ಕಾಮಗಾರಿಯೂ ಶೀಘ್ರದಲ್ಲೇ ಮುಗಿಯಲಿದೆ” ಎಂದು ತಿಳಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!