
ಹಾಸನಾಂಬೆ ದೇವಾಲಯದ (hasanamba temple) ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದಲ್ಲಿ ಹಾಸನದ ಜಿಲ್ಲಾಧಿಕಾರಿ (Hassan DC) ಕೆ.ಎಸ್.ಲತಾ ಕುಮಾರಿ (latha kumari) ಭಕ್ತರ ಜೊತೆ ಕೆಂಡ ಹಾಯ್ದು ಹರಕೆ ತೀರಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ಕಳಸ ಹೊತ್ತು ಮಹಿಳೆಯರು ಕೆಂಡ ಹಾಯುತ್ತಿರುವುದನ್ನು ನೋಡಿದೆ.
ನನಗೂ ಕೂಡ ಕೆಂಡ ಹಾಯಬೇಕು ಎಂದು ಮನಸ್ಸಾಯಿತು. ನಾನು ಹಿಂದೆಂದೂ ಕೆಂಡ ಹಾಯ್ದಿರಲಿಲ್ಲ. ಈ ವರ್ಷದ ಹಾಸನಾಂಬೆ ಉತ್ಸವ ಕೊನೆಯಾಗಿದೆ. ಅಪಾರ ಸಂಖ್ಯೆಯ ಭಕ್ತರು ದರ್ಶನ ಪಡೆದಿದ್ದಾರೆ. ಇಂದು ಮಧ್ಯಾಹ್ನ ಗರ್ಭಗುಡಿಯ ಬಾಗಿಲು ಮುಚ್ಚಲಿದೆ ಎಂದು ಕೆಂಡ ಹಾಯ್ದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಇನ್ನು ಈ ವೇಳೆ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಕೆಂಡೋತ್ಸವದಲ್ಲಿ ಭಾಗಿಯಾಗಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಯ ನಂತರ ಹಾಸನಾಂಬದ ದೇವಿ ಗರ್ಭಗುಡಿ ಬಾಗಿಲು ಹಾಕಲಾಗುವುದು. ಸಚಿವ ಕೃಷ್ಣ ಬೈರೇಗೌಡ, ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಎಸ್ಪಿ ಮೊಹಮ್ಮದ್ ಸುಜಿತಾ ಮತ್ತು ಉಪ ವಿಭಾಗಾಧಿಕಾರಿ ಮಾರುತಿ ಸಮ್ಮುಖದಲ್ಲಿ ಬಾಗಿಲು ಮುಚ್ಚಲಾಗುವುದು. ಕಳೆದ 13 ದಿನಗಳಿಂದ ತಾಯಿ ಹಾಸನಾಂಬೆ ದರ್ಶನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಹರಿದು ಬಂದಿದ್ದ ಭಕ್ತರು, ದೇವಿ ದರ್ಶನ ಪಡೆದು ಧನ್ಯರಾಗಿದ್ದಾರೆ.
ವರ್ಷದಲ್ಲಿ ಒಮ್ಮೆ ಮಾತ್ರ ದರ್ಶನ ಕೊಡುವ ತಾಯಿ ಹಾಸನಾಂಬೆ, ಈ ಬಾರಿಯೂ ಭಕ್ತರಿಗೆ ನಿರಾಸೆಯನ್ನುಂಟು ಮಾಡಿಲ್ಲ. ಕಳೆದ 13 ದಿನಗಳಲ್ಲಿ ಸುಮಾರು 26 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಕೊನೆಯ ದಿನವಾದ ಇಂದು ಸುಮಾರು 1.60 ಲಕ್ಷ ಭಕ್ತರು ಹಾಸನಾಂಬ ದೇಗುಲಕ್ಕೆ ಭೇಟಿ ನೀಡಿದ್ದು, ಹಾಸನಾಂಬೆಯ ದರ್ಶನ ಪಡೆದು ಪುನೀತರಾಗಿದ್ದಾರೆ.
ಇಂದು ಕೊನೆಯ ದಿನ ಭಕ್ತಸಾಗರವೇ ಹರಿದುಬರುತ್ತಿದ್ದು, ಸದ್ಯ ಸನ್ನಿಧಾನದಲ್ಲಿ ಧರ್ಮದರ್ಶನ ಸಾಲು ಎಂಟು ಕಿಲೋಮೀಟರ್ ಮುಟ್ಟಿದೆ. ಲಾಡು ಪ್ರಸಾದ, ಟಿಕೆಟ್ ಮಾರಾಟದಿಂದ 22 ಕೋಟಿ ರೂ.ಗೂ ಹೆಚ್ಚು ಆದಾಯ ಬಂದಿದೆ. ಈ ಬಾರಿ ಇತಿಹಾಸ ಬರೆದ ಹಾಸನಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಮಧ್ಯಾಹ್ನ ತೆರೆ ಬೀಳಲಿದೆ.






