

ಪುತ್ತೂರು: ವೈದ್ಯಕೀಯ ತಜ್ಞ ಡಾ. ನಝೀರ್ ಅಹಮದ್ ಅವರ ಡಯಾಬಿಟಿಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು ಹಾಗೂ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವರ ಆಶ್ರಯದಲ್ಲಿ ಮಾಸಿಕ ಥೈರಾಯಿಡ್ ಗ್ರಂಥಿ ತಪಾಸಣೆ, HbA1C, ಶುಗರ್, ಕೊಲೆಸ್ಟ್ರಾಲ್ ಹಾಗೂ ಬಿ.ಎಂ.ಡಿ (ಬೋನ್ ಮಿನರಲ್ ಡೆನ್ಸಿಟಿ) ಉಚಿತ ತಪಾಸಣಾ ಶಿಬಿರವು ಜ.15 ರಂದು ಕಲ್ಲಾರೆ ಕೃಷ್ಣ ಆರ್ಕೆಡ್‌ನಲ್ಲಿರುವ ಡಾ. ನಝೀರ್ ಅಹಮದ್ ಅವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಲಿದೆ.
ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ದತೆ ಅಥವಾ ಅತಿಸಾರ, ಶೀತ ಅಥವಾ ತಾಪಕ್ಕೆ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಷ್ಟವಾಗುವುದು, ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು ಸೇರಿದಂತೆ ಥೈರಾಯಿಡ್ ಸಂಬಂಧಿತ ಲಕ್ಷಣಗಳು ಇರುವವರು ಶಿಬಿರದಲ್ಲಿ ಭಾಗವಹಿಸಬಹುದು. ಜೊತೆಗೆ ಗಂಟಲಿನಲ್ಲಿ ಊದಿಕೆ, ಕರ್ಕಶಸ್ವರ, ಅಧಿಕ ಹೃದಯ ಬಡಿತ, ರಕ್ತದೊತ್ತಡ ಹಾಗೂ ಹೆಂಗಸರಲ್ಲಿ ಅತಿಯಾದ ಅಥವಾ ನಿಯಮ ತಪ್ಪಿದ ಮಾಸಿಕ ಸ್ರಾವ ಇರುವವರಿಗೂ ತಪಾಸಣೆ ಮಾಡಲಾಗುವುದು.
ಇದೇ ದಿನ ಜ.15 ರಂದು ಬೆಳಿಗ್ಗೆಯಿಂದ ಸಂಜೆವರೆಗೆ ಮಧುಮೇಹ ಕಣ್ಣಿನ ತಪಾಸಣಾ ಶಿಬಿರವೂ ಕ್ಲಿನಿಕ್‌ನಲ್ಲಿ ನಡೆಯಲಿದೆ. ಮಧುಮೇಹಿಗಳಲ್ಲಿ ಯಾವುದೇ ಲಕ್ಷಣಗಳಿಲ್ಲದೇ ಕಣ್ಣಿನ ನರ ಹಾನಿ (ಡಯಾಬಿಟಿಕ್ ರೆಟಿನೋಪತಿ) ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ, ಸಮಯಕ್ಕೆ ಸರಿಯಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಅತ್ಯಾಧುನಿಕ ಫಂಡಸ್ ಕ್ಯಾಮೆರಾ ಉಪಕರಣದ ಮೂಲಕ ರೆಟಿನೋಪತಿ ತಪಾಸಣೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
HbA1C ಹಾಗೂ ಲಿಪಿಡ್ ಪ್ರೊಫೈಲ್ ಪರೀಕ್ಷೆಗಳನ್ನು ಮುಂಚಿತವಾಗಿ ನೋಂದಾಯಿಸಿದ ಮೊದಲ 50 ಮಂದಿಗೆ ಮಾತ್ರ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 9481451929 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಡಾ. ನಝೀರ್ ಅಹಮದ್ ಡಯಾಬಿಟಿಸ್ ಸೆಂಟರ್ ಪ್ರಕಟಣೆ ತಿಳಿಸಿದೆ.






