
ಜ.31–ಫೆ.1ರಂದು ಮಂಗಳೂರಿನಲ್ಲಿ ಆಯುಷ್ ಹಬ್ಬ; ಸ್ಪೀಕರ್ ಯು.ಟಿ. ಖಾದರ್‌ರಿಂದ ಪೋಸ್ಟರ್ ಬಿಡುಗಡೆ
ಮಂಗಳೂರು, ಜ.3: ಆಯುಷ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಆಯುಷ್ ಹಬ್ಬ ಸಮಿತಿಯ ಸಹಕಾರದಲ್ಲಿ ಜಿಲ್ಲೆಯ ಎಲ್ಲಾ ಆಯುಷ್ ಆಸ್ಪತ್ರೆಗಳು, ಕಾಲೇಜುಗಳು ಮತ್ತು ವೃತ್ತಿನಿರತ ಆಯುಷ್ ವೈದ್ಯರ ಜಂಟಿ ಆಶ್ರಯದಲ್ಲಿ ಜ.31 ಮತ್ತು ಫೆ.1ರಂದು ಮಂಗಳೂರಿನ ಟಿಎಂಎ ಪೈ ಕನ್ವೆನ್ಶನಲ್ ಸೆಂಟರ್‌ನಲ್ಲಿ ಎರಡು ದಿನಗಳ ಆಯುಷ್ ಹಬ್ಬ ಆಯೋಜಿಸಲಾಗಿದೆ.
ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಯುಷ್ ಹಬ್ಬ ಸಮಿತಿ ಗೌರವಾಧ್ಯಕ್ಷೆ ಡಾ. ಆಶಾಜ್ಯೋತಿ ರೈ ಮಾತನಾಡಿ, 2014ರಲ್ಲಿ ಆಯುಷ್ ಉತ್ಸವ ಮತ್ತು 2015ರಲ್ಲಿ ಆಯುಷ್ ಹಬ್ಬವನ್ನು ಮಂಗಳೂರಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಹತ್ತು ವರ್ಷಗಳ ಬಳಿಕ ಮತ್ತೆ ಈ ಹಬ್ಬವನ್ನು ಆಯೋಜಿಸುತ್ತಿದ್ದು, ಆಯುಷ್ ಚಿಕಿತ್ಸಾ ಪದ್ಧತಿಗಳ ಕುರಿತು ಜನರಲ್ಲಿ ಅರಿವು ಮೂಡಿಸಿ ಅದರ ಪ್ರಯೋಜನವನ್ನು ಮನೆಮಟ್ಟಕ್ಕೆ ತಲುಪಿಸುವುದು ಹಬ್ಬದ ಉದ್ದೇಶ ಎಂದು ತಿಳಿಸಿದರು.
ಎರಡು ದಿನಗಳ ಉತ್ಸವಕ್ಕೆ ಸುಮಾರು 5,000 ವೈದ್ಯರು, 10,000 ಆಯುಷ್ ವೈದ್ಯಕೀಯ ವಿದ್ಯಾರ್ಥಿಗಳು, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಮತ್ತು 20,000ಕ್ಕೂ ಅಧಿಕ ಸಾರ್ವಜನಿಕರು ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು.
ಹಬ್ಬದ ಅಂಗವಾಗಿ ಉಚಿತ ಆರೋಗ್ಯ ಶಿಬಿರ, ಖ್ಯಾತ ಆಯುಷ್ ವೈದ್ಯರಿಂದ ಉಚಿತ ಚಿಕಿತ್ಸಾ ಸೇವೆ, ಮುಂಚಿತ ನೋಂದಣಿ ಮಾಡಿಕೊಂಡವರಿಗೆ ಉಚಿತ ನಾಡಿ ಪರೀಕ್ಷೆ, ನಾಡಿ ತರಂಗಿಣಿ ಯಂತ್ರದ ಮೂಲಕ ತಪಾಸಣೆ ನಡೆಯಲಿದೆ. ಹಿರಿಯ ನಾಗರಿಕರಿಗಾಗಿ ಆಯುಷ್ ಆರೈಕೆ, ಜೀವನಶೈಲಿ ನಿರ್ವಹಣಾ ಶಿಬಿರ, ಮಹಿಳಾ ಸ್ವಾಸ್ಥ್ಯ ಹಬ್ಬ, ಆಯುಷ್ ಸೌಂದರ್ಯ ಹಬ್ಬ, ಹೃದಯ ಆರೋಗ್ಯ ಸಂಭ್ರಮ, ಒತ್ತಡ ನಿವಾರಣಾ ಕೌಶಲ್ಯ ತರಬೇತಿ, ಆಯುಷ್ ವೈಜ್ಞಾನಿಕ ಅಧಿವೇಶನ, ಸ್ವದೇಶಿ ಸಾವಯವ ಹಬ್ಬ, ಆಯುಷ್ ಚಿಕಿತ್ಸಾ ದರ್ಶನ, ಸ್ವಾಸ್ಥ್ಯ ಪ್ರದರ್ಶನ ಹಾಗೂ ಔಷಧ ಮಳಿಗೆಗಳು ಇರಲಿವೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಆಯುಷ್ ಹ್ಯಾಕಥಾನ್, ಆಯುಷ್ ಸ್ಟಾರ್ಟ್‌ಅಪ್‌ಗಳು, ಉದ್ಯಮಿಗಳ ಸಭೆ, ಮಧುಮೇಹ ಆಹಾರ ಹಬ್ಬ, ಜೆನ್ ಝಡ್ ಯುವಜನತೆಗೆ ವಿಶೇಷ ಆಯುಷ್ ಕಾರ್ಯಕ್ರಮಗಳು, ಸಾಂಸ್ಕೃತಿಕ ಹಾಗೂ ಮನರಂಜನಾ ವೈಭವವೂ ನಡೆಯಲಿದೆ ಎಂದು ತಿಳಿಸಿದರು.
ಆಯುಷ್ ಹಬ್ಬದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ತಾವು ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಆಯುಷ್ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು ಎಂದು ಸ್ಮರಿಸಿದರು. ಆಯುರ್ವೇದ, ಹೋಮಿಯೋಪತಿ, ಯುನಾನಿ, ಸಿದ್ದಿ ಪದ್ಧತಿಗಳು ಭಾರತೀಯ ಋಷಿ–ಮುನಿಗಳು ವಿಶ್ವಕ್ಕೆ ನೀಡಿದ ಅಮೂಲ್ಯ ಕೊಡುಗೆಗಳಾಗಿದ್ದು, ಆಯುಷ್ ಪದ್ಧತಿಗಳ ಬಗ್ಗೆ ಜನರಲ್ಲಿ ಇನ್ನಷ್ಟು ಅರಿವು ಮೂಡಿಸಲು ಈ ಹಬ್ಬ ಉತ್ತಮ ವೇದಿಕೆಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಡಾ ಕೇಶವ ಪಿ.ಕೆ., ಜಿಲ್ಲಾ ಆಯುಷ್ ಅಧಿಕಾರಿ ಡಾ ಮುಹಮ್ಮದ್ ಇಕ್ಬಲ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಸಂಘಟನಾ ಕಾರ್ಯದರ್ಶಿ ಡಾ ಸಚಿನ್ ನಡ್ಕ, ಸಮಿತಿ ಕಾರ್ಯದರ್ಶಿ ಡಾ ಕೃಷ್ಣ ಗೋಖಲೆ, ಖಜಾಂಚಿ ಡಾ ಗೋಪಾಲಕೃಷ್ಣ ನಾಯಕ್, ಡಾ. ಎನ್.ಟಿ. ಅಂಚನ್,ಡಾ ನಂದೀಶ್, ಡಾ ಪ್ರವೀಣ್ ರೈ, ಡಾ. ಪ್ರದೀಪ್ ಪುತ್ತೂರು ಕೋಟೆಕಲ್, ಡಾ ದೇವದಾಸ್ ಪುತ್ರನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






