
ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 15ರಂದು ಮಹಾಶಿವರಾತ್ರಿ ಉತ್ಸವವು ವಿವಿಧ ಧಾರ್ಮಿಕ ಹಾಗೂ ಭಜನಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಈ ಬಾರಿ ಪ್ರಥಮ ಬಾರಿಗೆ ಮಹಾ ಶಿವಪಂಚಾಕ್ಷರಿ ಯಜ್ಞವನ್ನು ಆಯೋಜಿಸಲಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ತಿಳಿಸಿದ್ದಾರೆ.
ಉತ್ಸವದ ಅಂಗವಾಗಿ ಬೆಳಿಗ್ಗೆ 6 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ವಿವಿಧ ಭಜನಾ ತಂಡಗಳಿಂದ ನಿರಂತರ ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 9 ಗಂಟೆಗೆ ಶ್ರೀ ದೇವರಿಗೆ ಮಹಾ ಶಿವಪಂಚಾಕ್ಷರಿ ಯಜ್ಞ, ಶತರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ ಸೇವೆಗಳು ಜರುಗಲಿವೆ.
ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ ಹಾಗೂ ರಾತ್ರಿ ವಿವಿಧ ಉತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 7 ಗಂಟೆಯ ಬಳಿಕ ಶ್ರೀ ದೇವರ ಬಲಿ ಉತ್ಸವ ನಡೆಯಲಿದೆ. ಹೋರಾಂಗಣದಲ್ಲಿ ಉಡುಕೆ ಸುತ್ತು, ಚೆಂಡೆ ಸುತ್ತು ಕಾರ್ಯಕ್ರಮಗಳ ಬಳಿಕ ಕಂಡನಾಯಕನ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಲಿದೆ.
ಅನಂತರ ಪಲ್ಲಕ್ಕಿ ಉತ್ಸವ, ಸ್ಯಾಕ್ಸೋಫೋನ್ ವಾದನ, ಬ್ಯಾಂಡ್, ಭಜನೆ ಸುತ್ತು ಕಾರ್ಯಕ್ರಮಗಳು ಜರುಗಿ ಚಂದ್ರಮಂಡಲ ರಥೋತ್ಸವ ನಡೆಯಲಿದೆ. ಬಳಿಕ ಕೆರೆ ಉತ್ಸವ ನಡೆದು ದೇವರು ಒಳಗಾದ ನಂತರ ಏಕಾದಶ ರುದ್ರಾಭಿಷೇಕ, ರಾತ್ರಿ ಪೂಜೆ ಹಾಗೂ ಭೂತಬಲಿ ಉತ್ಸವ ನೆರವೇರಲಿದೆ ಎಂದು ತಿಳಿಸಿದ್ದಾರೆ.







