ಬೆಳ್ತಂಗಡಿ: ಕಡಬ ಪೊಲೀಸ್ ಠಾಣೆಯ ಅಪರಾಧ ಕ್ರಮಾಂಕ 15/2012ರ ಕಲಂ 302, 201 ಐಪಿಸಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕನ್ವಿಕ್ಷನ್ ವಾರಂಟ್ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆರೋಪಿಯನ್ನು ಎನ್.ಎಂ. ಅಜೀಜ್ (ತಂದೆ: ಮಹಮ್ಮದ್ ಕುಂಞಿ), ಅಜ್ಜಾವರ, ಸುಳ್ಯ ತಾಲೂಕು ನಿವಾಸಿ ಎಂದು ಗುರುತಿಸಲಾಗಿದೆ. ಕಡಬ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಈತನಿಗೆ 10 ವರ್ಷಗಳ ಶಿಕ್ಷೆ ವಿಧಿಸಿತ್ತು.
2018ರಲ್ಲಿ ಕೇರಳ ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡಿದ್ದ. ನಂತರ ಬಸವರಾಜು ವಿಶ್ವನಾಥ (ತಂದೆ: ಬಸವರಾಜು), ಜೇವರ್ಗಿ ತಾಲೂಕು, ಕಲಬುರಗಿ ಎಂಬ ಹೆಸರಿನಲ್ಲಿ ಗುರುತು ಬದಲಿಸಿಕೊಂಡು ಆಂಧ್ರಪ್ರದೇಶದಲ್ಲಿ ವಾಸಿಸುತ್ತಿದ್ದನೆಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಸ್ತುತ ಆಂಧ್ರಪ್ರದೇಶದ ಚಿತ್ತೂರು ಜೈಲಿನಲ್ಲಿ ಈತನಿರುವುದು ಪತ್ತೆಯಾಗಿದೆ. ಲಾಭಕ್ಕಾಗಿ ನಡೆಸಿದ 3 ಕೊಲೆ ಪ್ರಕರಣಗಳು ಹಾಗೂ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಈತ ಭಾಗಿಯಾಗಿರುವುದು ತಿಳಿದುಬಂದಿದೆ. ಅಲ್ಲದೆ, ಈತನ ಪತ್ತೆಯಿಂದ ಕೇರಳದ 3 LPC ಪ್ರಕರಣಗಳು, ಸುಳ್ಯ ಠಾಣೆಯ 2 LPC ಪ್ರಕರಣಗಳು ಮತ್ತು ಕಡಬ ಠಾಣೆಯ 1 ಕನ್ವಿಕ್ಷನ್ ವಾರಂಟ್ ಜಾರಿಯಾಗಿವೆ.
ಮಾನ್ಯ ಬೆಳ್ತಂಗಡಿ ಡಿವೈಎಸ್ಪಿ ಹಾಗೂ ಉಪ್ಪಿನಂಗಡಿ ವೃತ್ತ ನಿರೀಕ್ಷಕರವರ ನಿರ್ದೇಶನದಂತೆ ಕಡಬ ಠಾಣಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ದಕ್ಷಿಣ ಕನ್ನಡ ಜಿಲ್ಲಾ ಬೆರಳು ಮುದ್ರೆ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಪತ್ತೆ ಕಾರ್ಯ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!