ಬೆ ಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಆತ್ಮಹತ್ಯೆಗೆ ಶರಣಾದ ಪತ್ನಿಯನ್ನು ನೋಡಲು ಆಸ್ಪತ್ರೆಗೆ ಬರುತ್ತಿದ್ದಾಗ ಪತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಮಧುರಾ ಕರೆಪ್ಪ (30) ಹಾಗೂ ಕರೆಪ್ಪ ಗಂಗಪ್ಪ ಮಾದರ (36) ಮೃತ ದಂಪತಿಗಳು. ದಂಪತಿಗೆ ಮೂವರು ಮಕ್ಕಳು. ಮಧುರಾ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯ ಸಮಸ್ಯೆಯಿಂದ ತೀವ್ರವಾಗಿ ಮನನೊಂದು ವಿಷ ಸೇವಿಸಿದ್ದರು.ತಕ್ಷಣ ಅವರನ್ನು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಸ್ಥಿತಿ ಬಿಗಡಾಯಿಸಿದ್ದರಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಧುರಾ ಕೊನೆಯುಸಿರೆಳೆದಿದ್ದಾರೆ. ಪತ್ನಿ ಆಸ್ಪತ್ರೆಗೆ ದಾಖಲಾದ ವಿಷಯ ಕೇಳಿ ಪತಿ ಕರೆಪ್ಪ ಗಡಿಬಿಡಿಯಲ್ಲಿ ಬೈಕ್ ನಲ್ಲಿ ಆಸ್ಪತ್ರೆಗೆ ಬರುತ್ತಿದ್ದರು. ಈ ವೇಳೆ ಅರವಳ್ಳಿ ಕ್ರಾಸ್ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಕರೆಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಬೈಲಹೊಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತ್ತ ತಾಯಿ ಆತ್ಮಹತ್ಯೆ, ಇತ್ತ ಅಪಘಾತದಲ್ಲಿ ತಂದೆ ಸಾವು. ಪೋಷಕರನ್ನು ಕಳೆದುಕೊಂಡ ಮೂವರು ಮಕ್ಕಳು ಅನಾಥರಾಗಿದ್ದಾರೆ. ಮಕ್ಕಳು ಹಾಗೂ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.














