ಸಕಲೇಶಪುರ : ರೈಲ್ವೇ ಹಳಿಗಳ (Railway Track) ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದ ನೌಕರನೊಬ್ಬನಿಗೆ ರೈಲು ಡಿಕ್ಕಿಯಾಗಿ (Shocking) ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಕಲೇಶಪುರ (Sakaleshpur) ತಾಲೂಕಿನ ಎಡಕುಮೇರಿ, ಶಿರಬಾಗಿಲು ಮಾರ್ಗದಲ್ಲಿ ನಡೆದಿದೆ.
ರೈಲ್ವೇ ನೌಕರ ಸಚಿನ್ (36) ಎಂಬುವವರೇ ಗಾಯಗೊಂಡ ದುರ್ದೈವಿ. ಎಡಕುಮೇರಿ ಮತ್ತು ಶಿರಬಾಗಿಲು ನಡುವಿನ ರೈಲ್ವೇ ಮಾರ್ಗದಲ್ಲಿ ಎಂದಿನಂತೆ ಹಳಿಗಳ ದುರಸ್ತಿ ಅಥವಾ ತಪಾಸಣೆ ಕೆಲಸ ನಡೆಯುತ್ತಿತ್ತು. ಈ ವೇಳೆ ಹಳಿ ಮೇಲೆ ಕೆಲಸ ಮಾಡುತ್ತಿದ್ದ ಸಚಿನ್ ಅವರಿಗೆ ರೈಲು ಡಿಕ್ಕಿ ಹೊಡೆದಿದೆ. ರೈಲು ಬರುವುದನ್ನು ಗಮನಿಸದ ಕಾರಣ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ.
ರೈಲು ಡಿಕ್ಕಿ ಹೊಡೆದ ರಭಸಕ್ಕೆ ಸಚಿನ್ ಅವರ ತಲೆ, ಎದೆ ಹಾಗೂ ಮುಖದ ಭಾಗಕ್ಕೆ ತೀವ್ರ ಸ್ವರೂಪದ ಪೆಟ್ಟಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳದಲ್ಲಿದ್ದ ಸಹೋದ್ಯೋಗಿಗಳು ಮತ್ತು ಇತರ ನೌಕರರು ತಕ್ಷಣವೇ ಅವರನ್ನು ರಕ್ಷಿಸಿ ಸಕಲೇಶಪುರ ತಾಲೂಕು ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಗಾಯಾಳುವಿನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕುತ್ತಿದ್ದಾರೆ.














