ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಬ್ರಹ್ಮಾವರ ಠಾಣೆ ಎಸ್ಸೈ ಸೇರಿದಂತೆ ಇಬ್ಬರು ಪೊಲೀಸರನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಚೇರ್ಕಾಡಿ ಗ್ರಾಮದ ಮಹಿಳೆಗೆ ಶನಿವಾರ ರಾತ್ರಿ ಕಿರುಕುಳ ನೀಡಿದ ಆರೋಪದಲ್ಲಿ ಕೇರಳದ ಕೊಲ್ಲಂ ಮೂಲದ ಆರೋಪಿ ಬಿಜು ಮೋನು(45)ನನ್ನು ಪೊಲೀಸರು ಬ್ರಹ್ಮಾವರ ಠಾಣೆಗೆ ಕರೆದುಕೊಂಡು ಬಂದು, ಆತನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸುವಾಗ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪೂರ್ಣವಾಗಿ ಪಾಲಿಸದ ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಮಧು ಬಿ.ಇ. ಮತ್ತು ಪ್ರಭಾರ ಠಾಣಾಧಿಕಾರಿಯಾಗಿರುವ ಹೆಡ್‌ಕಾನ್‌ಸ್ಟೇಬಲ್ ಸುಜಾತ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಡಾ.ಅರುಣ್ ಕೆ. ತಿಳಿಸಿದ್ದಾರೆ.
ಸಿಐಡಿ ತನಿಖೆ ಆರಂಭ: ಬ್ರಹ್ಮಾವರ ಪೊಲೀಸ್ ಠಾಣೆಯ ಲಾಕಪ್‌ಡೆತ್ ಪ್ರಕರಣದ ತನಿಖೆಗಾಗಿ ಬೆಂಗಳೂರಿನ ಸಿಐಡಿ ಪೊಲೀಸ್ ಅಧೀಕ್ಷಕರು ಹಾಗೂ ಇವರ ತಂಡ ಸೋಮವಾರ ಉಡುಪಿಗೆ ಆಗಮಿಸಿದ್ದು, ಪ್ರಕರಣದ ತನಿಖೆ ಯನ್ನು ಮುಂದುವರಿಸಲಿದ್ದಾರೆ.
ಈ ಪ್ರಕರಣ ಲಾಕಪ್‌ಡೆತ್ ಆಗಿರುವುದರಿಂದ ಇದರ ತನಿಖೆಯನ್ನು ಸಿಐಡಿ ಕೈಗೆತ್ತಿಕೊಳ್ಳುತ್ತದೆ. ಅದರಂತೆ ಬೆಂಗಳೂರಿ ನಿಂದ ಆಗಮಿಸಿದ ಸಿಐಡಿ ತಂಡ, ಬ್ರಹ್ಮಾವರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಮಾಹಿತಿ ಸಂಗ್ರಹಿಸಿದೆ. ಅದೇ ರೀತಿ ಬ್ರಹ್ಮಾವರ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಶವಗಾರದಲ್ಲಿನ ಮೃತದೇಹವನ್ನು ಪರಿಶೀಲನೆ ನಡೆಸಿ, ವೈದ್ಯಾಧಿಕಾರಿಗಳ ಜೊತೆ ಮಾತುಕತೆ ನಡೆಸಿದೆ ಎನ್ನಲಾಗಿದೆ.
ಕುಟುಂಬಸ್ಥರಿಂದ ಪ್ರಕರಣ ದಾಖಲು: ಬಿಜು ಮೋನು ಲಾಕಪ್‌ನಲ್ಲಿ ಮೃತಪಟ್ಟಿರುವ ಮಾಹಿತಿಯನ್ನು ಪೊಲೀಸರು ನ.10ರಂದು ಬೆಳಗ್ಗೆ ಕೊಲ್ಲಂನಲ್ಲಿರುವ ಆತನ ಕುಟುಂಬಸ್ಥರಿಗೆ ನೀಡಿದ್ದರು. ಅದರಂತೆ ಅಲ್ಲಿಂದ ಹೊರಟ ಕುಟುಂಬಸ್ಥರು ಇಂದು ಬೆಳಗ್ಗೆ ಬ್ರಹ್ಮಾವರ ತಲುಪಿದ್ದಾರೆ.
ಬೆಳಗ್ಗೆ ಶವಗಾರಕ್ಕೆ ಆಗಮಿಸಿದ ಕುಟುಂಬಸ್ಥರು ಬಿಜು ಮೋನು ಅವರ ಮೃತ ದೇಹವನ್ನು ಪರಿಶೀಲಿಸಿದ್ದರು. ಬಳಿಕ ಬ್ರಹ್ಮಾವರ ಪೊಲೀಸ್ ಠಾಣೆಗೆ ತೆರಳಿದ ಮೃತ ಬಿಜು ಮೋನು ಅವರ ಚಿಕ್ಕಪ್ಪನ ಮಗ ಅನೀಶ್ ಡೆನಿಲ್ ನೀಡಿದ ದೂರಿ ನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮರಣೋತ್ತರ ಪರೀಕ್ಷೆ: ಮೃತದೇಹ ಹಸ್ತಾಂತರ
ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಇಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೀಡಿರುವ ನಿರ್ದೇಶನಗಳಂತೆ ಮೃತದೇಹದ ಪಂಚನಾಮೆಯನ್ನು ಉಡುಪಿ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರು ನಡೆಸಿದರು.
ಕುಟುಂಬಸ್ಥರ ಆಗಮನ ಬಳಿಕವೇ ಬ್ರಹ್ಮಾವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಸಂಜೆ ವೇಳೆ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಡೆಸಲಾಯಿತು.
ಇದರ ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ. ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಕುಟುಂಬಸ್ಥರು ಮೃತದೇಹವನ್ನು ಕೇರಳಕ್ಕೆ ತೆಗೆದುಕೊಂಡು ಹೋಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.