ಡೆಹ್ರಾಡೂನ್: ಮಗುವನ್ನು ಕರೆದುಕೊಂಡು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ(Physical Abuse) ನೀಡಿದ್ದಾನೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.
ವ್ಯಕ್ತಿ ಮಹಿಳೆಗೆ ಕಿರುಕುಳ ನೀಡಿದ್ದ ಘಟನೆ ಅಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಯಾರೋ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ವೈರಲ್ ಆಗಿರುವ ಹಿನ್ನೆಲೆಯಲ್ಲಿ ಡೆಹ್ರಾಡೂನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹಾಗೇ ಅವನ ಸ್ಕೂಟರ್ ಅನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವರದಿಗಳ ಪ್ರಕಾರ, ಮಹಿಳೆ ನಗರದ ಓಣಿಯಲ್ಲಿ ತನ್ನ ಮಗುವಿನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬಂದ ಸ್ಕೂಟರ್ ಸವಾರ ಮಹಿಳೆಯ ಎದೆಯನ್ನು ಸ್ಪರ್ಶಿಸಿ ಪರಾರಿಯಾಗಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲವನ್ನು ಸೃಷ್ಟಿಸಿದ್ದು, ನೆಟ್ಟಿಗರು ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಒಂದು ದಿನದ ನಂತರ ಡೆಹ್ರಾಡೂನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಹಾಗೇ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿ ಅವನ ಸ್ಕೂಟರ್ ಅನ್ನು ವಶಪಡಿಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಮಹಿಳೆಗೆ ಕಿರುಕುಳ ನೀಡಿದ ಆರೋಪಿಗೆ ಡೆಹ್ರಾಡೂನ್ ಪೊಲೀಸರು ಚುರುಕು ಮುಟ್ಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊವನ್ನು ಗಮನಿಸಿದ ಡೆಹ್ರಾಡೂನ್ ಎಸ್‌ಎಸ್ಪಿ ಎಸ್‌ಒಜಿ ಮತ್ತು ಪಟೇಲ್ ನಗರ ಪೊಲೀಸರ ಜಂಟಿ ತಂಡವನ್ನು ರಚಿಸಿ ಸ್ವಲ್ಪ ಸಮಯದಲ್ಲೇ ಆರೋಪಿಯನ್ನು ಆತನ ಸ್ಕೂಟಿ ಸಮೇತ ಅರೆಸ್ಟ್ ಮಾಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಈ ಹಿಂದೆ ಬೆಂಗಳೂರಿನಲ್ಲಿ ಕೂಡ ಮಹಿಳೆಗೆ ಕಿರುಕುಳ ನೀಡಿದ ಪ್ರಕರಣ ದಾಖಲಾಗಿತ್ತು. ಕೆಂಪಾಂಬುದಿ ಕೆರೆ ಬಳಿ ಹಾಡಹಗಲೇ ದೇವಸ್ಥಾನಕ್ಕೆ ಹೋಗಿ ಮರಳುತ್ತಿದ್ದ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿ ತನ್ನನ್ನು ಹಿಂದಿನಿಂದ ಹಿಡಿದು, ಬಾಯಿ ಮುಚ್ಚಿ ಸೀರೆಯನ್ನು ಎಳೆದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರು. ಆದರೆ ಆಕೆ ಗಟ್ಟಿಯಾಗಿ ಕೂಗಿಕೊಂಡ ಕಾರಣ ಮೂವರು ಅವಳ ರಕ್ಷಣೆಗೆ ಬಂದು ಆರೋಪಿಯನ್ನು ಚೆನ್ನಾಗಿ ಥಳಿಸಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.