ಪುತ್ತೂರು :ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘವು ನೂರು, ವರ್ಷ ಪೂರೈಸಿ ಭದ್ರವಾಗಿರುವ ಸಂಘವಾಗಿದೆ. ಸಂಘದ ಶತಮಾನೋತ್ಸವದ ಕಾರ್ಯಕ್ರಮ ಆರಂಭಗೊಂಡು ಈಗ ಸಮಾರೋಪ ಸಮಾರಂಭ ನಡೆಯುತ್ತಿದ್ದರೂ ಇದು ಸಮಾರೋಪ ಎಂಬ ಭಾವನೆಯೇ ಬರುತ್ತಿಲ್ಲ. ಬದಲಾಗಿ ಶತಮಾನೋತ್ಸವ ಪ್ರಾರಂಭವಾದಂತೆ ಭಾಸವಾಗುತ್ತಿದೆ ಎಂದು ರಾಜಾಪುರ ಸಾರಸ್ವತ ಸಮಾಜ ಬೆಂಗಳೂರು ಇದರ ಗೌರವ ಕಾರ್ಯದರ್ಶಿ ಅಶೋಕ್ ಪ್ರಭು ಕುಂಟುನಿ ಹೇಳಿದ್ದಾರೆ
ಅವರು ಭಾನುವಾರ (ಫೆ.23ರಂದು) ಸಂಟ್ಯಾರ್ ಸರಸ್ವತಿ ಪುರಂನಲ್ಲಿ ನಡೆದ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಶತಮಾನೋತ್ಸವದ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಮತ್ತು ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಕಟ್ಟಡ ‘ಸರಸ್ವತಿ ಸದನ’ದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣವು ವ್ಯಾಪಾರೀಕರಣವಾಗದೇ ಸಮಾಜದ ಅಭಿವೃದ್ಧಿಗೆ ಪೂರಕವಾಗಿರಲಿ  -ಅಣ್ಣಾ ವಿನಯಚಂದ್ರ:
ಸರಸ್ವತಿ ಎಜ್ಯುಕೇಶನ್ ಸೊಸೈಟಿಯ ಕಟ್ಟಡ ಸರಸ್ವತಿ ಸದನವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾವಿನಯಚಂದ್ರ ಮಾತನಾಡಿ,   ವ್ಯಾಪಾರೀಕರಣವಾಗದೇ ಸಮಾಜದ ಅಭಿವೃದ್ಧಿಗೆ ಪೂರಕವಾಗಿರಲಿ ಎಂದರು. ಬಹಳಷ್ಟು ಕಷ್ಟದ ದಿನಗಳಲ್ಲಿ ಸಂಘವನ್ನು ಬೆಳೆಸಲಾಗಿದೆ. ಐಟಿಐಗೆ ಅನುಮತಿ ದೊರೆಯುವುದು ಕಷ್ಟವಾಗಿದ್ದರೂ ಅನುಮತಿ ಹಾಗೂ ನಿವೇಶನ ಮಂಜೂರುಗೊಳಿಸಲು ಯಾವುದೇ ಲಂಚ ನೀಡದೇ ಕಾರ್ಯಗತಗೊಳಿಸಲಾಗಿದೆ. ಎಲ್ಲರ ಸಹಕಾರದಿಂದ ಭವ್ಯವಾದ ಕಟ್ಟಡ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ ಎಂದರು.
102 ವರ್ಷಗಳನ್ನು ಪೂರೈಸಿರುವ ಸಂಘದ ಹುಟ್ಟು, ಬೆಳೆದು ಬಂದ ಹಾದಿ, ಶತಮಾನೋತ್ಸವ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ಸ್ಥರಣ ಸಂಚಿಕೆ ‘ಶತ ಸ್ಮೃತಿಯನ್ನು  ಬೆಳ್ತಂಗಡಿ ಮಾರುತಿಪುರ ರೈತಬಂಧು ಆಹಾರೋದ್ಯಮದ ಶಿವಶಂಕರ ನಾಯಕ್  ಬಿಡುಗಡೆ  ಮಾಡಿದರು.  ಬಳಿಕ ಮಾತನಾಡಿದ ಅವರು “  ಅತ್ಯಂತ  ಕಷ್ಟದ ದಿನಗಳಲ್ಲಿ ಸ್ಥಾಪನೆಗೊಂಡ ಸಂಘವು  ನೂರು ವರ್ಷ ಪೂರೈಸಿರುವುದು ಖುಷಿಯ ವಿಚಾರ.  ನಮ್ಮ ಸಮಾಜದ ನೂರು ವರ್ಷಗಳ ಸಾಧನೆಯ ಸಮಗ್ರ ಮಾಹಿತಿಗಳನ್ನು ಒಳಗೊಂಡಿರುವ ಸ್ಮರಣ ಸಂಚಿಕೆಗೆ ಜಾಹೀರಾತು ನೀಡಿ ಸಹಕರಿಸಬೇಕು. ಇದರಲ್ಲಿ ಉಳಿಕೆಯಾದ ಮೊತ್ತವನ್ನು ಸಂಘಕ್ಕೆ ವಿನಿಯೋಗಿಸಬೇಕು ಎಂದರು 
ನಮ್ಮ ಸಮಾಜವು ಶಕ್ತಿ, ಸಾಮರ್ಥ್ಯ ಹೊಂದಿದ ಸಮಾಜ-ಎಸ್.ಆರ್ ಸತೀಶ್ಚಂದ್ರ :
ಮಾಡಿದ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಮಾತನಾಡಿ,  ನೂರಾರು ಜಾತಿ ಸಂಘಟನೆಗಳೂ ಬೇಷ್ ಎಂದು ಹೇಳುವಷ್ಟರ ಮಟ್ಟಿಗೆ ಸಾರಸ್ವತ ಸಮಾಜವು ಬೆಳೆದು ನಿಂತಿದೆ.  ನಮ್ಮ ಸಮಾಜದ ಬಗ್ಗೆ ಯಾರಿಗೂ ಕೀಳರಿಮೆ ಬೇಡ. ನಮ್ಮ ಸಮಾಜವು ಶಕ್ತಿ, ಸಾಮರ್ಥ್ಯ ಹೊಂದಿದ ಸಮಾಜವಾಗಿದ್ದು ಎಲ್ಲಾ ಕ್ಷೇತ್ರದಲ್ಲಿಯೂ ಪ್ರಭಾವಿ ವ್ಯಕ್ತಿಗಳಿದ್ದಾರೆ ಎಂದರು.
ವಾಣಿಜ್ಯ ಸಂಕೀರ್ಣಕ್ಕೆ ಸಮಾಜ ಬಾಂಧವರ ಸಹಕಾರ ಬೇಕು
ನಿವೇಶನ ಖರೀದಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಸುಮಾರು ರೂ.2 ಕೋಟಿ ವೆಚ್ಚವಾಗಿದೆ. ಎಲ್ಲಾ ಕೆಲಸ ಕಾರ್ಯಗಳಿಗಾಗಿ ಕಟ್ಟಕಡೆಯ ವ್ಯಕ್ತಿಗಳಿಂದ ಪ್ರಾರಂಭಿಸಿ ದಾನಿಗಳ ಸಹಕಾರ ದೊರೆತಿದೆ. ಮುಂದೆ ವಾಣಿಜ್ಯ ಸಂಕೀರ್ಣ, ಸಮುದಾಯ ಕೇಂದ್ರ, ದೇವತಾ ಆರಾಧನಾ ಕೇಂದ್ರ ನಿರ್ಮಿಸುವ ಯೋಜನೆಯಿದ್ದು  ಸಮಾಜ ಬಾಂಧವರ ಸಹಕಾರ ನೀಡಬೇಕೆಂದು  ಶತಮಾನೋತ್ಸವ ಸಮಿತಿಯ  ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶರ್ಮ ಪುಂಡಿಕ್ಕಾ ವಿನಂತಿಸಿದರು.
  ಅದ್ದೂರಿಯಾಗಿ ನಡೆದ ಕಾರ್ಯಕ್ರಮ
ಕೈವಲ್ಯ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಸರಸ್ವತೀ ಸ್ವಾಮಿ ಮಹಾರಾಜ್ ರವರಿಂದ ಉದ್ಘಾಟನೆಗೊಂಡ ಸಂಘದ ಶತಮಾನೋತ್ಸವದ ಕಾರ್ಯಕ್ರಮದ ಸಮಾರೋಪ ಸಮಾರಂಭವು  ಅದ್ದೂರಿಯಾಗಿ ನೆರವೇರಿತು.  ಯೋಗ, ಧ್ಯಾನ, ಸೂರ್ಯ ನಮಸ್ಕಾರದೊಂದಿಗೆ ಮುಂಜಾನೆ ಕಾರ್ಯಕ್ರಮಕ್ಕೆ  ಚಾಲನೆ ದೊರೆಯಿತು. ನಂತರ ಗಣಪತಿ ಹವನ, ಚಂಡಿಕಾ ಹವನ, ಶಿವಪೂಜೆ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ನಂತರ ಸರಸ್ಪತಿ ಎಜ್ಯುಕೇಶನ್ ಸೊಸೈಟಿ ಕಟ್ಟಡ ‘ಸರಸ್ವತಿ ಸದನ’ದ ಲೋಕಾರ್ಪಣೆ ನಡೆಯಿತು. ಬಳಿಕ ರುದ್ರ ಮಹಿಳಾ ಚೆಂಡೆ ಬಳಗದವರಿಂದ ಚೆಂಡೆ ವಾದನದೊಂದಿಗೆ ಅತಿಥಿಗಳನ್ನು ವೇದಿಕೆಗೆ ಸ್ವಾಗತಿಸಲಾಯಿತು. ಬಳಿಕ ಶಿವಾನಂದ ಸರಸ್ವತಿ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ, ಸನ್ಮಾನ. ಸ್ಮರಣ ಸಂಚಿಕೆ ಬಿಡುಗಡೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ, ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು. ಸಂಜೆ ಸುಕನ್ಯಾ ಸೇರಾಜೆ ಮತ್ತು ಅಶೋಕ್ ಕುಮಾರ್ ಸಂಟ್ಯಾರ್ ಸಾರಥ್ಯದಲ್ಲಿ ಪ್ರಸಿದ್ದ ಕಲಾವಿದರ ಕೂಡವಿಕೆಯಲ್ಲಿ ‘ಸುದರ್ಶನ ಗರ್ವಭಂಗ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. 
ಸನ್ಮಾನ
ಸನ್ಮಾನ ಸರಸ್ವತಿ ಎಂಬ ಕೇಶನ್ ಸೊಸೈಟಿ ಸ್ಥಾಪನೆಗೆ ಸಹಕಾರ ನೀಡಿದ ವಿಧಾನಪರಿಷತ್ – ಸದಸ್ಯ ಅಣ್ಣಾ ವಿನಯಚಂದ್ರ, ಸಂಘದ ಮಾಜಿ ಅಧ್ಯಕ್ಷರಾದ ದಿವಾಕರ ರಾವ್ ಬ್ರಹ್ಮರಗುಂಡ, ಉದಯ ಶಂಕರ ಕುಕ್ಕಾಡಿ, ಜಯಂತ ನಾಯಕ್ ಪೊಸವಳಿಕೆ, ಬಿ.ಆರ್ ಶುಭಕರ ರಾವ್, ಸರಸ್ವತಿ ವಿದ್ಯುಕೇಶನ್ ಸೊಸೈಟಿ ಅಧ್ಯಕ್ಷ ರಾಜಗೋಪಾಲ ಬಾಳೆಗುಳಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಹಾಗೂ ಸಂಘದ ಅಧ್ಯಕ್ಷ ಬಾಲಕೃಷ್ಣನಾಯಕ್ ಆಜೇರುರವರನ್ನು ಸನ್ಮಾನಿಸಲಾಯಿತು. ಶತಮಾನೋತ್ಸವದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರನ್ನು ಗೌರವಿಸಲಾಯಿತು.
ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷರಾದ, ಭಾಲಕೃಷ್ಣ ನಾಯಕ್ ಅಜೇರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಜಿಲ್ಲಾ ಕೈಗಾರಿಕ ಕೇಂದ್ರ ಇದರ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್, ಶಿವಮೊಗ್ಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಧುಸೂದನ್ ಎ, ಮಾಜಿ ಜಿಪಂ ಸದಸ್ಯೆ ಸರಸ್ವತಿ ಕಾಮತ್, ಎಣ್ಣಕಜೆ ಗ್ರಾ.ಪಂ ಅಧ್ಯಕ್ಷರು, ಕೇರಳ ರಾಜ್ಯ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ನ ನಿರ್ದೇಶಕರೂ ಆದ ಸೋಮಶೇಖರ್   ಉದ್ಯಮಿ ವಸಂತ ಕುಮಾರ್, ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ರಾಜ ಗೋಪಾಲ ಬಾಳೆಗುಳಿ, ಪ್ರಧಾನ ಕಾರ್ಯದರ್ಶಿ ರಮೇಶ್ ಪ್ರಭು, ಶ್ರೀ ಸರಸ್ವತಿ ಮಹಿಳಾ ಮಂಡಲದ ಅಧ್ಯಕ್ಷೆ ರಂಜಿತಾ ಪ್ರಭು, ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸಂಘದ ಮಾಜಿ ಅಧ್ಯಕ್ಷರಾದ ಬಿ.ಆರ್.ಶುಭಕರ ರಾವ್, ಉದಯ ಶಂಕರ ಕುಕ್ಕಾಡಿ, ದಿವಾಕರ ರಾವ್ ಬ್ರಹ್ಮರಗುಂಡ, ಜಯಂತ ನಾಯಕ್ ಪೊಸವಳಿಕೆ ವೇದಿಕೆಯಲ್ಲಿ ಉಪಸ್ಥಿತರಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!