ನೀರಿನೊಳಗೆ ಉಸಿರು ಬಿಗಿ ಹಿಡಿದು ಸೋಮರ್‌ಸಾಲ್ಟ್‌ ಮತ್ತು ಆಸನಗಳನ್ನು ಪ್ರದರ್ಶಿಸಿ ‘ವರ್ಲ್ಡ್‌ ವೈಡ್ ಬುಕ್ ಆಫ್ ರೆಕಾರ್ಡ್‌’ನಲ್ಲಿ ಸ್ಥಾನ ಪಡೆದಿದ್ದ ಈಜುಪಟು ಕೆ. ಚಂದ್ರಶೇಖರ ರೈ ಸೂರಿಕುಮೇರು (52) ಈಜುಕೊಳದಲ್ಲಿ ಮುಳುಗಿ ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಸಮೀಪದ ಸೂರಿಕುಮೇರು ಬರಿಬರದ ನಿವಾಸಿಯಾದ ಅವರು ಮಂಗಳೂರಿನ ಕುದ್ರೋಳಿಯಲ್ಲಿ ವಾಸವಾಗಿದ್ದರು. ಅವರಿಗೆ ಪತ್ನಿ ಮತ್ತು ಪುತ್ರಿ ಇದ್ದಾರೆ.

ಉಡುಪಿ ಈಜುಕೊಳದಲ್ಲಿ ಗುತ್ತಿಗೆ ಆಧಾರದಲ್ಲಿ ಲೈಫ್ ಗಾರ್ಡ್ ಆಗಿದ್ದ ಅವರು ಮೂರು ವರ್ಷದ ಹಿಂದೆ ಮಂಗಳೂರಿಗೆ ಬಂದು ಮಹಾನಗರಪಾಲಿಕೆ ಈಜುಕೊಳದ ನಿರ್ವಹಣೆ ಮಾಡುತ್ತಿದ್ದರು.

ಜೀವರಕ್ಷಕರಾಗಿ, ಕೆಲವರಿಗೆ ಈಜು ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

‘ಭಾನುವಾರ ಈಜುಕೊಳಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ನಿರ್ವಹಣೆಗೆ ಬಂದಿದ್ದ ಚಂದ್ರಶೇಖರ ರೈ ಕೊಳದ ನಿರ್ವಹಣೆಗೆ ತೆರಳಿದ್ದರು’ ಎಂದು ಪ್ರಭಾರ ವ್ಯವಸ್ಥಾಪಕ ರಮೇಶ್ ಬಿಜೈ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ವಲ್ಪ ಹೊತ್ತು ಅಭ್ಯಾಸ ಮಾಡುವುದಾಗಿ ಕಾವಲುಗಾರನಿಗೆ ತಿಳಿಸಿ ಮೊಬೈಲ್ ಫೋನ್ ಕೈಗಿತ್ತು ಡೈವ್ ಮಾಡಿದ್ದಾರೆ. ಮಧ್ಯಕ್ಕೆ ತಲುಪುತ್ತಿದ್ದಂತೆ ಉಸಿರುಕಟ್ಟಿ ಸಾವಿಗೀಡಾಗಿರುವುದಾಗಿ ಕಾವಲುಗಾರ ಹೇಳಿದ್ದಾರೆ. ಅಭ್ಯಾಸ ಮಾಡುವಾಗ ಆಘಾತವಾಗಿರುವ ಸಾಧ್ಯತೆ ಇದೆ’ ಎಂದು ರಮೇಶ್ ತಿಳಿಸಿದರು.

ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಿತು ಎಂದು ಚಂದ್ರಶೇಖರ್ ಅವರ ಸಹೋದರ ರಾಧಾಕೃಷ್ಣ ರೈ ತಿಳಿಸಿದರು.

ಒಂದೇ ಉಸಿರಿನಲ್ಲಿ 28 ಬಾರಿ ಮುಂಭಾಗಕ್ಕೆ ತಿರುಗಿ (ಫ್ರಂಟ್ ಫ್ಲಿ‍ಪ್ ಸೋಮರ್‌ಸಾಲ್ಟ್‌) ಕೆ. ಚಂದ್ರಶೇಖರ ರೈ ‘ವರ್ಲ್ಡ್‌ ವೈಡ್ ಬುಕ್ ಆಫ್ ರೆಕಾರ್ಡ್‌’ನಲ್ಲಿ 2023ರಲ್ಲಿ ಸ್ಥಾನ ಗಳಿಸಿದ್ದರು. ಅದಕ್ಕೂ ಮೊದಲು ಎರಡು ಬಾರಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್‌’ನಲ್ಲಿ ಸ್ಥಾನ ಗಳಿಸಿದ್ದರು

Leave a Reply

Your email address will not be published. Required fields are marked *

Join WhatsApp Group
error: Content is protected !!