
ಪುತ್ತೂರು: ಸಮಾಜದಲ್ಲಿ ಸಹಕಾರಿ ಸಂಸ್ಥೆಗಳು ಬೆಳೆಯುತ್ತಿರುವಾಗ, ಮಕ್ಕಳ ಶಿಕ್ಷಣಕ್ಕೆ ಸಹಾಯಧನ ನೀಡುವ ಕಾರ್ಯದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ನಿಜಕ್ಕೂ ಮಾದರಿಯಾಗಿದೆ.
ಶನಿವಾರ ನಗರದ ದರ್ಬೆಯ ಪ್ರಶಾಂತ್ ಮಹಲ್‌ನ ಸನ್ನಿಧಿ ಹಾಲ್ ನಲ್ಲಿ ಸಂಘದ ವತಿಯಿಂದ ನಡೆದ “ವಿದ್ಯಾನಿಧಿ – ಸಹಾಯಧನ ವಿತರಣಾ ಸಮಾರಂಭ”ದಲ್ಲಿ, ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ಮತ್ತು ಕಡಬ ತಾಲ್ಲೂಕಿನ ಸರ್ಕಾರಿ ಶಾಲೆಗಳ 7 ಮತ್ತು 8ನೇ ತರಗತಿಯ 250 ಮಂದಿ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಲಾ ರೂ.2,000ರಂತೆ ಒಟ್ಟು ರೂ.31 ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, “ಆದರ್ಶ ಸಹಕಾರ ಸಂಘವು ನಿಜಕ್ಕೂ ಸಮಾಜಕ್ಕೆ ಆದರ್ಶ. ಅಧ್ಯಕ್ಷ ಸವಣೂರು ಸೀತಾರಾಮ ರೈ ಅವರ ಉತ್ತಮ ಮನಸ್ಸು ಮತ್ತು ಧ್ಯೇಯದಿಂದ ಈ ರೀತಿಯ ಸಮಾಜಮುಖಿ ಕಾರ್ಯ ಸಾಧ್ಯವಾಗಿದೆ” ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರಿನ ಶ್ರೀರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೈರಾಜ್ ಬಿ.ರೈ, “ವಿದ್ಯಾಭ್ಯಾಸಕ್ಕೆ 250 ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವುದು ಸಣ್ಣ ಕೆಲಸವಲ್ಲ. ಇದು ಮಕ್ಕಳ ಮೇಲಿನ ಪ್ರೀತಿ ಮತ್ತು ಬದ್ಧತೆಯ ಸಾಕ್ಷಿ” ಎಂದು ಹೇಳಿದರು.
ಕೆಯ್ಯೂರಿನ ಮಹಿಮರ್ದಿನಿ–ದುರ್ಗಾಮರಮೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯರಾಮ ರೈ ಎ.ಕೆ. ಅವರು ಮಾತಾನಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ನಿರ್ದೇಶಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸ್ವಾಗತವನ್ನು ಸಂಘದ ಅಧ್ಯಕ್ಷ ಸಹಕಾರರತ್ನ ಕೆ.ಸೀತಾರಾಮ ರೈ ಸವಣೂರು ಸಲ್ಲಿಸಿದರು. ಪ್ರಾರ್ಥನೆಯನ್ನು ಕೇಂದ್ರ ಕಚೇರಿ ಸಿಬ್ಬಂದಿ ಶ್ರಮಿತಾ ಕೆ. ನೆರವೇರಿಸಿದರು. ನಿರ್ದೇಶಕ ಜೈರಾಜ್ ಭಂಡಾರಿ ನೋಣಾಲು ವಂದಿಸಿದರು. ನಿರೂಪಣೆಯನ್ನು ಪರಮೇಶ್ವರ ಗೌಡ ಬಿ. ಮತ್ತು ಚಂದ್ರಶೇಖರ್ ಪಿ. ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಎಸ್.ಎಂ. ಬಾಪು ಸಾಹೇಬ್ ಸುಳ್ಯ, ಬಿ.ಮಹಾಬಲ ರೈ ಬೋಳಂತೂರು, ಕೆ.ರವೀಂದ್ರನಾಥ ಶೆಟ್ಟಿ ಕೇನ್ಯ, ವಿ.ವಿ.ನಾರಾಯಣ ಭಟ್ ನರಿಮೊಗರು, ಎನ್.ಜಯಪ್ರಕಾಶ್ ರೈ ಚೊಕ್ಕಾಡಿ, ಎನ್.ರಾಮಯ್ಯ ರೈ ಕೆದಂಬಾಡಿ, ಸೀತಾರಾಮ ಶೆಟ್ಟಿ ಬಿ.ಮಂಗಳೂರು, ಚಿಕ್ಕಪ್ಪ ನಾಯಕ್ ಅರಿಯಡ್ಕ, ಪೂರ್ಣೀಮಾ ಎಸ್.ಆಳ್ವ, ಮಹಾದೇವ ಎಂ.ಮಂಗಳೂರು, ಯಮುನಾ ಎಸ್.ರೈ, ರಶ್ಮಿ ಎಸ್.ರೈ ಉಪಸ್ಥಿತರಿದ್ದರು.






