
ಪುತ್ತೂರು: ಸ್ಪೋರ್ಟ್ಸ್ ಕೋಟಾದ ಮೂಲಕ ಭಾರತೀಯ ರೈಲ್ವೆಯಲ್ಲಿ ಉದ್ಯೋಗವನ್ನು ಗಳಿಸಿರುವ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ಹಿರಿಯ ವಿದ್ಯಾರ್ಥಿನಿ ಪವಿತ್ರಾ.ಜಿ ಅವರನ್ನು ಕಾಲೇಜಿನಲ್ಲಿ ಭಾನುವಾರ ಸನ್ಮಾನಿಸಲಾಯಿತು.
ಟ್ರಿಪಲ್ ಜಂಪ್ ಮತ್ತು ಲಾಂಗ್ ಜಂಪ್‌ನಲ್ಲಿ ರಾಷ್ಟ್ರಮಟ್ಟದ ಸಾಧನೆಗಳನ್ನು ಮಾಡಿರುವ ಪವಿತ್ರಾ ಅವರು, ಪ್ರಸ್ತುತ ಬೆಂಗಳೂರಿನ ನೈರುತ್ಯ ರೈಲ್ವೇ ಕೇಂದ್ರ ಕಚೇರಿಯಲ್ಲಿ ಉದ್ಯೋಗಕ್ಕೆ ನೇಮಕಗೊಂಡಿದ್ದಾರೆ.
ಉಡುಪಿಯ ಆರ್ಯಬೆಟ್ಟುವಿನ ಗೋಪಾಲ ಕುಲಾಲ್ ಹಾಗೂ ಸುನಂದ ದಂಪತಿಯ ಪುತ್ರಿಯಾಗಿರುವ ಪವಿತ್ರಾ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೆರ್ಡೂರಿನಲ್ಲಿ, ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ನಿಟ್ಟೆಯಲ್ಲಿ ಪೂರೈಸಿ, ಎಂಬಿಎ ವ್ಯಾಸಂಗವನ್ನು ಪುತ್ತೂರಿನ ವಿವೇಕಾನಂದ ಕಾಲೇಜ್‌ನಲ್ಲಿ ನಡೆಸಿದ್ದಾರೆ.
ಕ್ರೀಡಾ ಸಾಧನೆಯಲ್ಲಿ ಅಸಾಮಾನ್ಯ ಮೆರಗು ತೋರಿದ ಇವರು ಬೆಳಗಾವಿಯ ವಿ.ಟಿ.ಯು. ಅಂತರ್ಕಾಲೇಜು ಕ್ರೀಡಾಕೂಟದಲ್ಲಿ ಚಿನ್ನದ ಪದಕ ಹಾಗೂ ಹೊಸ ದಾಖಲೆ, ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ, ಒಡಿಶಾದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಕಂಚಿನ ಪದಕ, ಚೆನ್ನೈನಲ್ಲಿ ನಡೆದ ಇಂಡಿಯನ್ ಗ್ರಾಂಡ್‌ಪ್ರಿಕ್ಸ್‌ನಲ್ಲಿ ಚಿನ್ನದ ಪದಕ ಹಾಗೂ ಹರ್ಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಗಳಿಸಿದ್ದರು. ರೈಲ್ವೆಯಲ್ಲಿ ನೇಮಕಾತಿಯ ಬಳಿಕ ನಡೆದ ಅಖಿಲ ಭಾರತ ರೈಲ್ವೇ ಕ್ರೀಡಾಕೂಟದಲ್ಲೂ ಕಂಚಿನ ಪದಕದ ಸಾಧನೆ ಮಾಡಿದ್ದಾರೆ.
ಕಾಲೇಜಿನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್ ಟಿ.ಎಸ್., ನಿರ್ದೇಶಕರಾದ ರವಿಕೃಷ್ಣ ಡಿ. ಕಲ್ಲಾಜೆ, ಸತ್ಯನಾರಾಯಣ ಭಟ್, ಸಂತೋಷ್ ಕುತ್ತಮೊಟ್ಟೆ, ಡಾ. ಯಶೋಧಾ ರಾಮಚಂದ್ರ, ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ ಕೆ., ಎಂಬಿಎ ವಿಭಾಗದ ನಿರ್ದೇಶಕ ಡಾ. ರಾಬಿನ್ ಮನೋಹರ್ ಶಿಂಧೆ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಉಪಸ್ಥಿತರಿದ್ದರು.






