
ಪುತ್ತೂರು; ಮನೆ ಅಡಿಸ್ಥಳದ ಹಕ್ಕು ಪತ್ರಕ್ಕಾಗಿ ಸರಕಾರದ ಯೋಜನೆಯಾಗಿದ್ದ ೯೪ ಸಿ ಮತ್ತು ೯೪ ಸಿಸಿ ಯಡಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ತಿರಸ್ಕೃತಗೊಳಿಸಲಾಗಿದ್ದು ಆ ರೀತಿಯ ಅರ್ಜಿಗಳ ಮರುಪರಿಶೀಲನೆಗೆ ಕಂದಾಯ ಇಲಾಖೆಗೆ ಸುತ್ತೋಲೆ ಹೊರಡಿಸುವಂತೆ ಕಂದಾಯ ಇಲಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರಿಗೆ ಶಾಸಕ ಅಶೋಕ್ ರೈ ಮನವಿ ನೀಡಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಅಧಿಕಾರಿಯನ್ನು ಭೇಟಿಯಾದ ಶಾಸಕರು ಈ ಬಗ್ಗೆ ಚರ್ಚೆ ನಡೆಸಿದರು. ೯೪ ಸಿಸಿ ಮತ್ತು ೯೪ ಸಿಯಡಿ ಅನೇಕ ಬಡ ಫಲಾನುಭವಿಗಳು ಮನೆಯ ಅಡಿಸ್ಥಳದ ಹಕ್ಕು ಪತ್ರ ಪಡೆಯುವ ಉದ್ದೇಶದಿಂದ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರು ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿವಿಧ ಕಾರಣಗಳಿಗೆ ತಿರಸ್ಕಾರ ಮಾಡಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು ೪೮೦೦ ಅರ್ಜಿಗಳನ್ನು ಈ ಹಿಂದೆ ತಿರಸ್ಕಾರ ಮಾಡಲಾಗಿದೆ. ಅರ್ಜಿ ತಿರಸ್ಕಾರ ಮಾಡಿರುವ ಕಾರಣ ಅರ್ಜಿ ಹಾಕಿದ ಫಲಾನುಭವಿಗಳಿಗೆ ಮನೆ ಅಡಿಸ್ಥಳದ ಹಕ್ಕು ಪತ್ರ ಪಡೆಯಲು ಸಾಧ್ಯವಾಗಿಲ್ಲ. ಫಲಾನುಭವಿಗಳ ಪೈಕಿ ಬಹುತೇಕರು ಬಡವರಾಗಿದ್ದು ಇಂದಿಗೂ ಅವರ ಮನೆ ಅಡಿಸ್ಥಳಕ್ಕೆ ಯಾವುದೇ ದಾಖಲೆಯನ್ನು ಹೊಂದಿರುವುದಿಲ್ಲ. ಕಂದಾಯ ಇಲಾಖೆಯ ಮೂಲಕ ವಿಲೇವಾರಿಯಾಗದೆ ತಿರಸ್ಕಾರ ಗೊಂಡ ಅರ್ಜಿಗಳನ್ನು ಮರುಪರಿಶೀಲನೆ ಮಾಡಲು ಕಂದಾಯ ಇಲಾಖೆಗೆ ಸುತ್ತೋಲೆ ಹೊರಡಿಸುವಂತೆ ಶಾಸಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಅಧಿಕಾರಿ ಶಾಸಕರಲ್ಲಿ ತಿಳಿಸಿದ್ದಾರೆ.
ಈ ಹಿಂದೆ ತಿರಸ್ಕಾರಗೊಂಡ ೯೪ಸಿ ಮ್ತತು ೯೪ ಸಿಸಿ ಅರ್ಜಿಗಳನ್ನು ಮತ್ತೆ ವಿಲೇವಾರಿ ಮಾಡಬೇಕಿದೆ. ಯಾವುದೋ ಕಾರಣಕ್ಕೆ ಅಧಿಕಾರಿಗಳನ್ನು ಅದನ್ನು ತಿರಸ್ಕಾರ ಮಾಡಿದ್ದಾರೆ. ಸುಮಾರು ೪೮೦೦ ಅರ್ಜಿಗಳು ತಿರಸ್ಕಾರಗೊಂಡಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಬಡವರು ತಾವು ಮನೆ ಕಟ್ಟಿ ವಾಸವಾಗಿರುವ ಅಡಿಸ್ಥಳಕ್ಕೆ ಹಕ್ಕು ಪತ್ರ ಕೇಳಿರುವುದು ಅದನ್ನು ಕೊಡಬೇಕು ಎಂದು ಹೇಳಿದ್ದೇನೆ. ಬಡವರಿಗೆ ನ್ಯಾಯ ಒದಗಿಸಿಕೊಡುವಲ್ಲಿ ನನ್ನ ಪ್ರಯತ್ನ ಮುಂದುವರೆಯುತ್ತದೆ. ಸುತ್ತೋಲೆ ಹೊರಡಿಸಿ ಅರ್ಜಿಗಳ ಮರು ಪರಿಶೀಲನೆಗೆ ಆದೇಶ ಮಾಡುವಂತೆ ಕೇಳಿಕೊಂಡಿದ್ದೇನೆ ಶೀಘ್ರ ಸುತ್ತೋಲೆ ಹೊರಡಿಸಬಹುದು ಎಂಬ ಪೂರ್ಣ ವಿಶ್ವಾಸವೂ ಇದೆ
ಅಶೋಕ್ ರೈ, ಶಾಸಕರು ಪುತ್ತೂರು






