ಬಂಟ್ವಾಳ: ತಾಲೂಕಿನ ಕಲ್ಲಡ್ಕದಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಉದ್ಯಮ ನಡೆಸುತ್ತಿದ್ದ ಯುವಕನೊಬ್ಬ ಸಂಪಾಜೆ ಸಮೀಪದ ಗೂನಡ್ಕದ ಲಾಡ್ಜ್ ಒಂದರ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿದ್ದಾರೆ.
ಮೃತರನ್ನು ಪಾಣೆಮಂಗಳೂರು ಹೊರವಲಯದ ಬೊಂಡಾಲ ಶಾಂತಿಗುಡ್ಡೆ ನಿವಾಸಿ ನಾರಾಯಣ ಕುಲಾಲ್ ಅವರ ಪುತ್ರ ತಿಲಕರಾಜ್ (28) ಎಂದು ಗುರುತಿಸಲಾಗಿದೆ.
ಮಾರ್ಚ್ 19ರಂದು ಅನಂತಾಡಿ ಪ್ರದೇಶದ ಮನೆಯೊಂದರಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಕೆಲಸಕ್ಕೆ ಅಗತ್ಯವಿದ್ದ ಸಾಮಗ್ರಿಗಳನ್ನು ಒದಗಿಸಿ ಬಂದಿದ್ದ ಅವರು, ಮಾರ್ಚ್ 20ರ ಸಂಜೆಯಿಂದ ಮನೆಯವರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.
ತಿಲಕರಾಜ್ ಕಲ್ಲಡ್ಕದಿಂದ ಮಡಿಕೇರಿ ರಸ್ತೆಯ ಮೂಲಕ ತಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದು, ಮಾರ್ಚ್ 20ರ ಸಂಜೆ ಸಂಪಾಜೆ ಸಮೀಪದ ಗೂನಡ್ಕದಲ್ಲಿ ಲಾಡ್ಜ್ ರೂಮ್ ಪಡೆದಿದ್ದರು ಎನ್ನಲಾಗಿದೆ. ಮಾರ್ಚ್ 21ರ ಬೆಳಗ್ಗೆ ಕೊಠಡಿಯ ಬಾಗಿಲು ತೆರೆಯದಿದ್ದುದರಿಂದ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ, ಸಮಾಜ ಸೇವಕ ತಾಜ್ ಅವರ ಸಹಕಾರದೊಂದಿಗೆ ಕಿಟಕಿ ಮೂಲಕ ಒಳ ಪ್ರವೇಶಿಸಿದಾಗ ತಿಲಕರಾಜ್ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಘಟನೆ ಸಂಬಂಧ ಸಂಪಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.














