ಮಂಗಳೂರು, ಮಾ.22: ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಆರೋಪದಲ್ಲಿ ಯುವಕನನ್ನು ಕೊಣಾಜೆ ಪೊಲೀಸರು ಬಂಧಿಸಿ, ಸುಮಾರು ₹1,06,000 ಮೌಲ್ಯದ ಎಂ.ಡಿ.ಎಮ್.ಎ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಮಂಗಳೂರು ತಾಲೂಕು ಕಸಬ ಬೆಂಗ್ರೆ ನಿವಾಸಿ ಮೊಹಮ್ಮದ್ ಝಾಕೀರ್ (19) ಎಂದು ಗುರುತಿಸಲಾಗಿದೆ.
ಮಾರ್ಚ್ 22ರಂದು ಕೊಣಾಜೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡಕ್ಕೆ, ಉಳ್ಳಾಲ ತಾಲೂಕು ಬೆಳ್ಳ ಗ್ರಾಮದ ಕೆ.ಎಸ್. ಹೆಗ್ಡೆ ಆಸ್ಪತ್ರೆ ಎದುರಿನ ಫೀಜಾ ಮೈದಾನದ ಸಾರ್ವಜನಿಕ ಸ್ಥಳದಲ್ಲಿ ಯುವಕನೊಬ್ಬ ಎಂ.ಡಿ.ಎಮ್.ಎ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಇತರ ಗಿರಾಕಿಗಳಿಗೆ ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡುತ್ತಿರುವ ಮಾಹಿತಿ ಲಭಿಸಿತ್ತು. ಮಾಹಿತಿ ಮೇರೆಗೆ ಪಂಚರ ಸಮ್ಮುಖದಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು.
ಆತನಿಂದ 10.6 ಗ್ರಾಂ ತೂಕದ ಎಂ.ಡಿ.ಎಮ್.ಎ (ಅಂದಾಜು ಮೌಲ್ಯ ₹1,06,000), ಒಂದು ಸ್ಯಾಮ್‌ಸಂಗ್ ಮೊಬೈಲ್ ಫೋನ್ (₹10,000 ಮೌಲ್ಯ), ಡಿಜಿಟಲ್ ತೂಕ ಮಾಪಕ, ಜಿಪ್ ಲಾಕ್ ಕವರ್, ಸ್ಮೋಕ್ ಟ್ಯೂಬ್, ಸಿರಿಂಜ್, ಸಿಗರ್ ಲೈಟ್ ಹಾಗೂ ನಂಬರ್ ಪ್ಲೇಟ್ ಇಲ್ಲದ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 25/2026ರಡಿ ಎನ್‌ಡಿಪಿಎಸ್ ಕಾಯ್ದೆ-1985ರ ಕಲಂ 8(c), 22, 22(a), 22(b), 22(c) ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಈ ಕಾರ್ಯಾಚರಣೆಯನ್ನು ಕೊಣಾಜೆ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀ ನಾಗರಾಜ್ ಎಸ್ ಅವರ ನೇತೃತ್ವದಲ್ಲಿ ನಡೆಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!