ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ ತಿರುಚಿದ ವಿಡಿಯೋ ಹಂಚಿದ ಆರೋಪಿಯೊಬ್ಬನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
2025ರ ಅಕ್ಟೋಬರ್‌ನಲ್ಲಿ ಫೇಸ್‌ಬುಕ್‌ನ “ನಝೀರ ಮಂಗಳೂರು” ಖಾತೆಯಿಂದ ಎಐ ತಂತ್ರಜ್ಞಾನ ಬಳಸಿ ತಿರುಚಿದ ವಿಡಿಯೋವನ್ನು ಹಂಚಲಾಗಿದ್ದು, ಅದು ಸಮಾಜದಲ್ಲಿ ಕೋಮುದ್ವೇಷ ಉಂಟುಮಾಡುವ ಉದ್ದೇಶ ಹೊಂದಿದೆ ಎಂಬ ದೂರಿನ ಮೇರೆಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ 196, 353(1), 351(2) ಅಡಿಯಲ್ಲಿ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ತನಿಖೆ ವೇಳೆ “ನಝೀರ ಮಂಗಳೂರು” ಖಾತೆಯನ್ನು ಬಳಸಿದ ವ್ಯಕ್ತಿ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ನಿವಾಸಿ ಮಹಮ್ಮದ್ ರಫೀಕ್ (38) ಎಂಬುದು ದೃಢಪಟ್ಟಿತು.
ಆರೋಪಿಯನ್ನು ಮಾರ್ಚ್ 22, 2026ರಂದು ಬೆಂಗಳೂರಿನಲ್ಲಿ ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.














