ಪುತ್ತೂರು: ಪುತ್ತೂರಿನಲ್ಲಿ ಖಾಲಿ ಇರುವ ಅಲ್ಪಸಂಖ್ಯಾತ ಇಲಾಖೆಯ ಕಾಮನ್ ಸರ್ವಿಸ್ ಸೆಂಟರ್ ಕಟ್ಟಡದಲ್ಲಿ ಅಲ್ಪಸಂಖ್ಯಾತ ಬಾಲಕರ ವಸತಿ ನಿಲಯ ಆರಂಭಿಸುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ರಾಜ್ಯದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ಪುತ್ತೂರು ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಶಿಕ್ಷಣಕ್ಕಾಗಿ ನಗರಕ್ಕೆ ಆಗಮಿಸುವ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸಮರ್ಪಕ ವಸತಿ ಸೌಲಭ್ಯಗಳ ಕೊರತೆ ಇರುವುದರಿಂದ ಹೊಸ ವಸತಿ ನಿಲಯದ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ವಿಶೇಷವಾಗಿ ದೂರದ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ಸುರಕ್ಷಿತ ಮತ್ತು ಕೈಗೆಟಕುವ ವಸತಿ ವ್ಯವಸ್ಥೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ನಗರದಲ್ಲಿ ಈಗಾಗಲೇ ನಿರ್ಮಾಣಗೊಂಡು ಖಾಲಿ ಇರುವ ಕಾಮನ್ ಸರ್ವಿಸ್ ಸೆಂಟರ್ ಕಟ್ಟಡವನ್ನು ವಸತಿ ನಿಲಯವಾಗಿ ಬಳಸಿದರೆ ಸರ್ಕಾರಕ್ಕೆ ಹೆಚ್ಚುವರಿ ವೆಚ್ಚ ತಪ್ಪುವುದರ ಜೊತೆಗೆ ಸಾರ್ವಜನಿಕ ಆಸ್ತಿಯ ಸದುಪಯೋಗವಾಗಲಿದೆ ಎಂದು ಶಾಸಕ ಅಶೋಕ್ ರೈ ಮನವಿಯಲ್ಲಿ ವಿವರಿಸಿದ್ದಾರೆ.

ಮನವಿಗೆ ಸ್ಪಂದಿಸಿದ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಪುತ್ತೂರಿನಲ್ಲಿ ಅಲ್ಪಸಂಖ್ಯಾತ ಬಾಲಕರ ವಸತಿ ನಿಲಯ ಆರಂಭಿಸಲು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಎಚ್. ಮಹಮ್ಮದ್ ಅಲಿ ಹಾಗೂ ಕಾಂಗ್ರೆಸ್ ಮುಖಂಡ ರೋಷನ್ ರೈ ಬನ್ನೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!