ಪುತ್ತೂರು :ಪ್ರಸಕ್ತ ಸನ್ನಿವೇಶದಲ್ಲಿ ಯುವ ಸಮೂಹ ಮಾದಕ ದ್ರವ್ಯದ ದಾಸರಾಗುತ್ತಿದ್ದು ಇದರಿಂದಾಗಿ ಸಮಾಜದಲ್ಲಿ ದೈನಂದಿನ ಕೆಡುಕುಗಳು,ಅನ್ಯಾಯ,ಹಿಂಸೆ ಹಾಗೂ ಅಪರಾಧ ಕೃತ್ಯಗಳು ವೃದ್ಧಿಸುತ್ತಾ ಇದೆ.ಅದೇ ರೀತಿ ಮದುವೆ ಇನ್ನಿತರ ಶುಭ ಕಾರ್ಯಗಳ ಹೆಸರಿನಲ್ಲಿ ದುಂದು ವೆಚ್ಚ,ಅನಾಚಾರಗಳು ಕೂಡ ನಿಯಂತ್ರಿಸಲಾರದಷ್ಟು ಬೆಳೆಯುತ್ತಿದೆ.
      ಇದರ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಯುವಕರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಒಂದು ಉತ್ತಮ ಸಮಾಜ ನಿರ್ಮಾಣ ಮಾಡುವ ಸಲುವಾಗಿ ಯುವ ಸಮೂಹವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಜ್ಯದ ಪ್ರತೀ ಮೊಹಲ್ಲಾಗಳ ಇಮಾಮರುಗಳು, ಜಮಾಅತ್ ಮತ್ತು ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರ ಸಮಿತಿಯ ವತಿಯಿಂದ ಜನವರಿ 8ರಂದು ಬುಧವಾರ ಬೆಳಿಗ್ಗೆ ಗಂಟೆ 9:00ರಿಂದ ಮಧ್ಯಾಹ್ನ 2 ಗಂಟೆಯ ತನಕ ಪುತ್ತೂರಿನ ಕಲ್ಲೇಗ ಜುಮಾ ಮಸೀದಿಯ ವಠಾರದ ಶಂಸುಲ್ ಉಲಮಾ ನಗರ ಪುತ್ತೂರು ತಂಙಳ್ ವೇದಿಕೆಯಲ್ಲಿ ಸಮಸ್ತ ಯುವ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಸ್ತ ಜಂಇಯ್ಯತುಲ್ ಖುತಬಾ ಜಿಲ್ಲಾ ಕಾರ್ಯದರ್ಶಿ ಅಬ್ದುರ್ರಶೀದ್ ರಹ್ಮಾನಿ ಪರ್ಲಡ್ಕ ತಿಳಿಸಿದರು.
      ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,ಬೆಳಿಗ್ಗೆ 9ಕ್ಕೆ ರಿಜಿಸ್ಟ್ರೇಷನ್ ನಡೆಯಲಿದ್ದು 9:15ಕ್ಕೆ ಕಲ್ಲೇಗ ಜುಮಾ ಮಸೀದಿಯ ಅಧ್ಯಕ್ಷರಾದ ಕೆ.ಪಿ ಮುಹಮ್ಮದ್ ಹಾಜಿಯವರು ಸಮಸ್ತದ ಧ್ವಜಾರೋಹಣ ಮಾಡಲಿದ್ದಾರೆ ಎಂದರು.
        ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಸಮಸ್ತ ಕರ್ನಾಟಕ ಮುಶಾವರದ ಅಧ್ಯಕ್ಷರಾದ ಸಯ್ಯಿದ್ ಎನ್.ಪಿ.ಎಂ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕರವರು ಅಧ್ಯಕ್ಷತೆ ವಹಿಸುವರು. ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್‌ ಪತ್ತೂರುರವರು ದುಆ ನೆರವೇರಿಸಲಿದ್ದು ದ.ಕ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅನುಗ್ರಹ ಭಾಷಣ ಮಾಡಲಿದ್ದಾರೆ.ಸಮಸ್ತ ಕರ್ನಾಟಕ ಮುಶಾವರದ ಪ್ರಧಾನ ಕಾರ್ಯದರ್ಶಿ ಖಾಝಿ ಬಿ.ಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣರವರು ಸ್ವಾಗತ ಭಾಷಣ ಮಾಡಲಿದ್ದು ಕಾರ್ಯಾಧ್ಯಕ್ಷರಾದ ಕೆ.ಎಂ ಉಸ್ಮಾನುಲ್ ಫೈಝಿ ತೋಡಾರುರವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.
      ಪಿ.ಎಂ ಅಬ್ದುಸ್ಸಲಾಂ ಬಾಖವಿ ವಡಕ್ಕೇಕಾಡ್ ಮತ್ತು ಅನ್ವರಲಿ ಮುಹಿಯುದ್ದೀನ್ ಹುದವಿಯ ಆಲುವಾರವರು ವಿಷಯ ಮಂಡಿಸಲಿದ್ದು ,ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರೀ ತಂಙಳ್ ಬೆಳ್ತಂಗಡಿ ಸಹಿತ ಹಲವಾರು ಮಂದಿ ಅತಿಥಿಗಳಾಗಿ ಭಾಗವಹಿಸುವರು.
          ಸಮಸ್ತ ಕರ್ನಾಟಕ ಮುಶಾವರದ ಸದಸ್ಯರಾದ ಪಿ.ಎಂ ಉಮರ್ ದಾರಿಮಿ ಸಾಲ್ಮರ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪುತ್ತೂರು ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಜಂಇಯ್ಯತುಲ್ ಮುಅಲ್ಲಿಮೀನ್  ಜಿಲ್ಲಾಧ್ಯಕ್ಷರಾದ ಶಂಸುದ್ದೀನ್ ದಾರಿಮಿ ಈಶ್ವರಮಂಗಲ,ಎಸ್ಕೆಎಸ್ಸೆಸ್ಸೆಫ್ ಈಸ್ಟ್ ಅಧ್ಯಕ್ಷರಾದ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ  ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!